×
Ad

ಈಶ್ವರಪ್ಪರನ್ನು ಬಂಧಿಸಲು ಇನ್ನೆಷ್ಟು ಸಾಕ್ಷಿ ಬೇಕು?: ದಿನೇಶ್ ಗುಂಡೂರಾವ್

Update: 2022-04-13 17:41 IST

ಬೆಂಗಳೂರು, ಎ. 13: ‘ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಯ ಪ್ರಮುಖ ಆರೋಪಿ ಸಚಿವ ಈಶ್ವರಪ್ಪ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸಂತೋಷ್ ಸಾವಿಗೂ ಮುನ್ನ ಕಳಿಸಿರುವ ವಾಟ್ಸ್ ಆ್ಯಪ್ ಸಂದೇಶದಲ್ಲೂ ನೇರವಾಗಿ ಈಶ್ವರಪ್ಪ ಹೆಸರಿದೆ ಎಂಬುದು ಗೊತ್ತಾಗಿದೆ. ಈಶ್ವರಪ್ಪರನ್ನು ಬಂಧಿಸಲು ಪೊಲೀಸರ ತಡವೇಕೆ? ಪೊಲೀಸರಿಗೆ ಇನ್ನೆಷ್ಟು ಸಾಕ್ಷಿ ಬೇಕು?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಭ್ರಷ್ಟ ಈಶ್ವರಪ್ಪರನ್ನು ರಕ್ಷಿಸಲು ಭಂಡತನಕ್ಕೆ ಇಳಿದಿರುವ ಬಿಜೆಪಿ ನಾಯಕರು ವಾಟ್ಸ್ ಆ್ಯಪ್ ಸಂದೇಶವನ್ನು ಡೆತ್‍ನೋಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ಅತಾರ್ಕಿಕ ವಾದ ಮಂಡಿಸುತ್ತಿದ್ದಾರೆ. ಬಿಜೆಪಿಯವರ ಪ್ರಕಾರ ಸಂತೋಷ್ ಫೇಸ್‍ಬುಕ್ ಲೈವ್‍ನಲ್ಲಿ ಬಂದು ನೇಣು ಹಾಕಿಕೊಳ್ಳಬೇಕಿತ್ತೆ? ಅಥವಾ ವಿಡಿಯೋ ಮಾಡಿ ಸಾಯಬೇಕಿತ್ತು ಎಂಬರ್ಥವೆ?' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಇಂಡಿಯನ್ ಎವಿಡೆನ್ಸ್ ಆಕ್ಟ್ ನಲ್ಲಿ ಡೈಯಿಂಗ್ ಡಿಕ್ಲರೇಷನ್‍ಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ವ್ಯಕ್ತಿಯೊಬ್ಬ ಸಾವಿನ ಮುಂಚೆ ಬರೆದಿರುವ ಡೆತ್ ನೋಟ್‍ಗೂ ಇದೆ. ಡೆತ್ ನೋಟ್ ವಾಟ್ಸ್ ಆ್ಯಪ್‍ನಲ್ಲಿದೆ ಎನ್ನುವುದು ಪಲಾಯನದ ದಾರಿ ಹುಡುಕುವ ವ್ಯರ್ಥ ಪ್ರಯತ್ನವಷ್ಟೇ ಈಶ್ವರಪ್ಪನವರು ಎಸ್ಕೇಪ್ ರೂಟ್ ಹುಡುಕುವುದು ಬಿಟ್ಟು ನೆಲದ ಕಾನೂನಿಗೆ ತಲೆ ಬಾಗಲಿ' ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

‘ಬಸವರಾಜ ಬೊಮ್ಮಾಯಿಯವರು ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡದೆ ಹೋದರೆ ಕೊಲೆಗಡುಕ ಸಂಪುಟದ ನಾಯಕರಾಗಲಿದ್ದಾರೆ. ಇಂತಹ ಸಂಪುಟದಿಂದ ರಾಜ್ಯದ ಜನ ನೆಮ್ಮದಿಯಾಗಿರಲು ಸಾಧ್ಯವೇ? ಬಿಜೆಪಿ ವರಿಷ್ಠರು ಈಗಲಾದರೂ ನೈತಿಕತೆಯಿಂದ ವರ್ತಿಸಲಿ. ಸಂತೋಷ್ ಆತ್ಮಹತ್ಯೆಯ ಆರೋಪಿ ಸಚಿವ ಈಶ್ವರಪ್ಪರ ವಿರುದ್ಧ ಕ್ರಮಕ್ಕೆ ಬೊಮ್ಮಾಯಿಯವರಿಗೆ ಸೂಚಿಸಲಿ' ಎಂದು ದಿನೇಶ್ ಗುಂಡೂರಾವ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News