ದೇಶದಲ್ಲೇ ಪ್ರಥಮ ಬಾರಿಗೆ ಡೈರೆಕ್ಟರೇಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ರಚನೆ: ಸಚಿವ ಬಿ.ಸಿ.ಪಾಟೀಲ್

Update: 2022-04-13 17:14 GMT

ಬೆಂಗಳೂರು, ಎ. 13: ‘ಡೈರೆಕ್ಟರೇಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ರಚನೆ ಕುರಿತ ಪ್ರಧಾನಿ ಕನಸನ್ನು ರಾಜ್ಯದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ನನಸು ಮಾಡಿದ್ದು, ಇದರಿಂದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗುಡಿ ಕೈಗಾರಿಕೆ ಮೂಲಕ ರೈತರಿಗೆ ಹೆಚ್ಚಿನ ಆದಾಯ, ಉದ್ಯೋಗ ಹೆಚ್ಚಳ ಸಾಧ್ಯ. ಕೃಷಿ ಉಪ ಉತ್ಪನ್ನಗಳ ತಯಾರಿಕೆಯೂ ಸಾಧ್ಯವಾಗುತ್ತಿದೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆತ್ಮನಿರ್ಭರ್ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳನ್ನು ರಚಿಸಲು ಸೆಕೆಂಡರಿ ಡೈರೆಕ್ಟರೇಟ್ ನೆರವಾಗಲಿದೆ. ಇದರಡಿ ಘಟಕಕ್ಕೆ ಪಡೆದ ಸಾಲಕ್ಕೆ ಶೇ.35ರಷ್ಟು ಸಬ್ಸಿಡಿ ಸಿಗಲಿದೆ. ಅಲ್ಲದೆ ರಾಜ್ಯ ಸರಕಾರವು ಶೇ.15 ಸಬ್ಸಿಡಿ ನೀಡಲಿದ್ದು, ಒಟ್ಟು ಶೇ.50ರಷ್ಟು ಸಬ್ಸಿಡಿ ಸಿಗಲಿದೆ ಎಂದು ನುಡಿದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಮಕ್ಕಳಿಗೆ ಕೃಷಿ ಕಾಲೇಜು ಸೇರಲು ಶೇ.40ರಷ್ಟು ಮೀಸಲಾತಿ ಇತ್ತು. ಅದನ್ನು 2021ರಲ್ಲಿ ಶೇ.50ಕ್ಕೆ ಹೆಚ್ಚಿಸಲಾಗಿದೆ. ಕಳೆದ ವರ್ಷ 186 ಜನ ರೈತರ ಮಕ್ಕಳಿಗೆ ಹೆಚ್ಚುವರಿ ಸೀಟು ಲಭಿಸಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ರೈತ ವಿದ್ಯಾನಿಧಿ ಆರಂಭ ಮಾಡಿದ್ದು, ಇದರಿಂದ 7.13 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 261 ಕೋಟಿ ರೂ. ವಿದ್ಯಾರ್ಥಿವೇತನ ಸಿಕ್ಕಿದೆ. ಇದು ದೇಶದಲ್ಲೇ ಮೊದಲು. ಇದರಲ್ಲಿ ಜಾತಿ ಧರ್ಮದ ಭೇದ ಇಲ್ಲ' ಎಂದು ಅವರು ತಿಳಿಸಿದರು.

‘ಕರ್ನಾಟಕದಲ್ಲಿ ಒಟ್ಟು 742 ರೈತ ಸಂಪರ್ಕ ಕೇಂದ್ರಗಳಿದ್ದು, ಅದರಲ್ಲಿ 694 ಕೃಷಿ ಯಾಂತ್ರೀಕರಣ ಕೇಂದ್ರಗಳನ್ನು ಸ್ಥಾಪಿಸಿ 22ಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆಗೆ ಕೊಡಲಾಗುತ್ತಿದೆ. ಟ್ರ್ಯಾಕ್ಟರ್ ಮತ್ತಿತರ ಉಪಕರಣ ಇಲ್ಲದ ರೈತರಿಗೆ ಇದರಿಂದ ಪ್ರಯೋಜನ ಸಿಗುತ್ತಿದೆ. ಕೃಷಿ ಯಂತ್ರೋಪಕರಣ ಬ್ಯಾಂಕ್ ಆರಂಭವಾಗಿದೆ. ರಾಜ್ಯದಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ. 50 ಸಾವಿರ ಮೆಟ್ರಿಕ್ ಟನ್ ಗೊಬ್ಬರವನ್ನು ಈ ವರ್ಷಕ್ಕಾಗಿ ನಾವು ದಾಸ್ತಾನು ಮಾಡಿದ್ದೇವೆ. ಯೂರಿಯಾ 30 ಸಾವಿರ ಮೆಟನ್ ಇದ್ದು, ಡಿಎಪಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ ಎಂದು ತಿಳಿಸಿದರು.

ಸೂಕ್ಷ್ಮ ನೀರಾವರಿಗೂ ಆದ್ಯತೆ ಕೊಡುತ್ತಿದ್ದು, ನೆರವು ನೀಡಲಾಗುತ್ತಿದೆ. ರಿವಾರ್ಡ್ ರಿಜುವನೇಟಿಂಗ್ ವಾಟರ್‍ಹೆಡ್ ಫಾರ್ ಅಗ್ರಿಕಲ್ಚರ್ ಯೋಜನೆಯು ಕರ್ನಾಟಕಕ್ಕೆ ಸಿಕ್ಕಿದ್ದು, ರಾಜ್ಯದ 21 ಜಿಲ್ಲೆಗಳಲ್ಲಿ 600 ಕೋಟಿ ವೆಚ್ಚದಡಿ ಮುಂದಿನ 5 ವರ್ಷಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ನ್ಯೂ ಜನರೇಷನ್ ವಾಟರ್‍ಹೆಡ್ ಯೋಜನೆಯಡಿ 642 ಕೋಟಿ ಮೊತ್ತವನ್ನು 51 ತಾಲೂಕುಗಳಲ್ಲಿ ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News