ಮುಖ್ಯ ನ್ಯಾಯಾಧೀಶರ ಭೇಟಿ ಬಳಿಕ ಮುಂದಿನ ಕ್ರಮ: ದಲಿತ ಸಂಘಟನೆಗಳ ಮುಖಂಡರಿಗೆ ಸಿಎಂ ಬೊಮ್ಮಾಯಿ ಭರವಸೆ
ಬೆಂಗಳೂರು, ಎ. 13: ‘ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಜತೆ ಚರ್ಚಿಸಿ ಮುಖ್ಯ ನ್ಯಾಯಾಧೀಶರ ಭೇಟಿ ಮಾಡಿ ಮುಂದಿನ ಕ್ರಮ ವಹಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜರುಗಿದ ದಲಿತ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಮಲ್ಲಿಕಾರ್ಜುನಗೌಡ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳು ಫೆಬ್ರವರಿ 19ರಂದು ಸಲ್ಲಿಸಿದ ಮನವಿಯ ಕುರಿತು ಸರಕಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ದಲಿತ ಸಮುದಾಯಕ್ಕೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಗೌರವ ಹೆಚ್ಚಿಸುವಂತೆ ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ನ್ಯಾಯಾಧೀಶ ಮಲ್ಲಿಕಾರ್ಜುಗೌಡ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳುವ ವಿಷಯವು ನ್ಯಾಯಾಂಗದ ವ್ಯಾಪ್ತಿಗೆ ಬರುವುದರಿಂದ ಮುಖ್ಯ ನ್ಯಾಯಾಧೀಶರನ್ನು ಭೇಟಿಯಾಗಲು ಅವಕಾಶ ಒದಗಿಸುವಂತೆ ಸಂಘಟನೆಗಳು ಮನವಿ ಮಾಡಿದರು. ಕಾನೂನು ಸಚಿವರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಮುಖ್ಯನ್ಯಾಯಮೂರ್ತಿ ಭೇಟಿ ಮಾಡಿ ಮುಖತಃ ಮಾತುಕತೆ ನಡೆಸುವ ಕ್ರಮ ವಹಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಎ.18ಕ್ಕೆ ಮತ್ತೊಂದು ಸಭೆ: ಪಿಟಿಸಿಎಲ್ ಕಾಯ್ದೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶ, ಬಗರ್ ಹುಕುಂ ಸಾಗುವಳಿ, ಎಸ್ಸಿಪಿ-ಟಿಎಸ್ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ತಡೆಗಟ್ಟಲು 7 ‘ಡಿ' ರದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪುತ್ರಿ ಸುಳ್ಳು ಜಾತಿಪ್ರಮಾಣ ಪತ್ರ ಪಡೆದಿರುವ ಬಗ್ಗೆ ಎ.18ಕ್ಕೆ ಮತ್ತೊಂದು ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಹೀಗಾಗಿ ನಾಳೆ(ಎ.14) ನಡೆಯಲಿರುವ ಡಾ.ಅಂಬೇಡ್ಕರ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾಲಾರ್ಪಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ನೀಡಲು ದಲಿತ ಸಂಘಟನೆಗಳು ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ. ನ್ಯಾ.ಮಲ್ಲಿಕಾರ್ಜುನಗೌಡ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಕಾದುನೋಡುವ ತೀರ್ಮಾನಕ್ಕೆ ದಲಿತ ಸಂಘಟನೆಗಳು ಬಂದಿವೆ ಎಂದು ಗೊತ್ತಾಗಿದೆ.
ಸಭೆಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಾರಿಗೆ ಮತ್ತು ಎಸ್ಟಿ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಬಿ. ಗೋಪಾಲ್, ಚನ್ನಕೃಷ್ಣಪ್ಪ, ವೆಂಕಟಸ್ವಾಮಿ, ಮಾರಪ್ಪ, ಜಿಗಣಿ ಶಂಕರ್, ಅಣ್ಣಯ್ಯ, ಎನ್.ಮೂರ್ತಿ, ಶ್ರೀಧರ್ ಕಲಿವೀರ, ಟಿ.ಡಿ.ರಾಜಗಿರಿ, ವಿ.ನಾಗರಾಜ್, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಸಹಿತ ಹಲವು ನಾಯಕರು ಹಾಜರಿದ್ದರು.