VIDEO| ಈಶ್ವರಪ್ಪರನ್ನು ಬಂಧಿಸದಿದ್ದಲ್ಲಿ ರಾಜಭವನಕ್ಕೆ ಮುತ್ತಿಗೆ: ಬಡಗಲಪುರ ನಾಗೇಂದ್ರ

Update: 2022-04-13 18:16 GMT

ಮೈಸೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿದ್ದು, ಕೂಡಲೇ ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಪಡೆದು ಬಂಧಿಸಬೇಕು ಇಲ್ಲದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರಾಜಭವನ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ಎಚ್ಚರಿಕೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಕೆ.ಎಸ್.ಈಶ್ವರಪ್ಪ ಅವರು  ಗುತ್ತಿಗೆ ಹೆಸರಿನಲ್ಲಿ 40% ಕಮೀಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮೃತ ಸಂತೋಷ್ ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ  ಪ್ರಮುಖವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಹೆಸರು  ಕೇಳಿ ಬಂದಿದೆ. ಜೊತೆಗೆ  ಸಂತೋಷ್ ಪಾಟೀಲ್ ಅವರ ಪತ್ನಿ ಮತ್ತು ಕುಟುಂಬದವರು ಈಶ್ವರಪ್ಪ ಅವರ ಕಿರುಕುಳವೇ ಸಂತೋಷ್ ಸಾವಿಗೆ ಕಾರಣ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಿಲ್ಲ, ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಸಂತೋಷ್ ಪಾಟೀಲ್ ಈ ಹಿಂದೆಯೇ ಭ್ರಷ್ಟಾಚಾರದ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಪ್ರಧಾನ ಮಂತ್ರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದನ್ನೆಲ್ಲಾ ನೋಡಿದರೆ  ಗುತ್ತಿಗೆಯಲ್ಲಿನ 40% ಹಣದ ಪಾಲು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರಿಗೆ ತಲುಪುತಿತ್ತು ಎನಿಸುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಈಶ್ವರಪ್ಪ ಮತ್ತು ಅವರ ಆಪ್ತರ ಮೇಲೆ ಇನ್ನು ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘದ ವತಿಯಿಂದ ರಾಜಭವನ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಇದೆ ರೀತಿಯ ಪ್ರಕರಣ ಸಾಮಾನ್ಯ ಜನರಿಗೆ ಆಗಿದ್ದರೆ ಸರ್ಕಾರ ಬಿಡುತ್ತಿತ್ತೆ? ಈ ಸಂತೋಷ್ ಬಿಜೆಪಿ ಪಕ್ಷದ ಕಾರ್ಯಕರ್ತ, ಜೊತೆಗೆ ಹಿಂದೂ ವಾಹಿನಿಯ ಮುಖ್ಯಸ್ಥ ಕೂಡ ಆಗಿದ್ದ, ಇವರ ಪಕ್ಷದ ಕಾರ್ಯಕರ್ತನ ಸಾವಿಗೀಡಾಗಿದ್ದರೂ ಸರ್ಕಾರ ಪ್ರಭಾವಿ ಸಚಿವರನ್ನು ರಕ್ಷಿಸಲು ಮುಂದಾಗಿರುವುದು ನಾಚಿಕೆಗೇಡು, ನಿಮ್ಮ ಪಕ್ಷದ ಹೇಳಿಕೆಗಳು ಇರಲಿ ಮೊದಲು ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪಡೆದು ಬಂಧಿಸಿ ಎಂದು ಒತ್ತಾಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News