ಕೊರೋನ ಮಾರ್ಗಸೂಚಿ ಉಲ್ಲಂಘನೆ: ಈಶ್ವರ್ ಖಂಡ್ರೆ ವಿರುದ್ಧ ಕೋರ್ಟ್‍ನಿಂದ ಜಾಮೀನು ರಹಿತ ಬಂಧನ ವಾರೆಂಟ್

Update: 2022-04-14 15:18 GMT
ಈಶ್ವರ್ ಖಂಡ್ರೆ

ಬೆಂಗಳೂರು, ಎ.14: ಕೊರೋನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಕಾಂಗ್ರೆಸ್ ಮುಖಂಡರಾದ ಎನ್.ಎಸ್.ಮಂಜುನಾಥ್ ಮತ್ತು ಬಸವನಗೌಡ ಬಾದರ್ಲಿ ವಿರುದ್ಧ ನಗರದ ಎಸಿಎಂಎಂ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. 

ಈ ಕುರಿತಂತೆ ನಾರಾಯಣಿ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸಿದ ನಗರದ 42ನೆ ಎಸಿಎಂಎಂ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಕೋರ್ಟ್‍ನ ನ್ಯಾಯಾಧೀಶ ಜೆ.ಪ್ರೀತ್ ಅವರು ಈ ಆದೇಶ ಹೊರಡಿಸಿದ್ದಾರೆ. 

ಇದೇ ವೇಳೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪರ ವಕೀಲರು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಗೆ ಖುದ್ದು ಹಾಜರಾಗುವುದರಿಂದ ಡಿ.ಕೆ. ಶಿವಕುಮಾರ್ ಅವರಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು. 

ಅದನ್ನು ಪರಿಗಣಿಸಿದ ನ್ಯಾಯಾಲಯ, ಪ್ರಕರಣ ಕುರಿತು ಎ.17ರಂದು ನಡೆಯುವ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ನಿರ್ದೇಶಿಸಿದೆ.

ಈ ಮಧ್ಯೆ ಕಳೆದ ವಿಚಾರಣೆ ವೇಳೆ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ವಿಧಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣದ ಇತರೆ ಆರೋಪಿಗಳಾಗಿರುವ ಶಫೀವುಲ್ಲಾ ಮತ್ತು ಸಲೀಂ ಮೊಹಮ್ಮದ್ ಅವರು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ಅವರಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ಹಾಗೆಯೇ, ಭದ್ರತಾ ಖಾತರಿಯಾಗಿ ಈ ಇಬ್ಬರೂ ತಲಾ ಐದು ಸಾವಿರ ರೂ. ಠೇವಣಿ ಇಡಬೇಕು ಎಂದು ಆದೇಶಿಸಿದೆ. ಅಲ್ಲದೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಈಶ್ವರ್ ಖಂಡ್ರೆ, ಎನ್.ಎಸ್ ಮಂಜುನಾಥ್ ಮತ್ತು ಬಸವನಗೌಡ ಬಾದರ್ಲಿಗೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.

ಕೊರೋನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧಕ್ಷ್ಯ ಈಶ್ವರ್ ಖಂಡ್ರೆ, ಕಾಂಗ್ರೆಸ್ ಮುಖಂಡರಾದ ಎನ್.ಎಸ್. ಮಂಜುನಾಥ್, ಬಸವನಗೌಡ ಬಾದರ್ಲಿ, ಶಫೀವುಲ್ಲಾ ಮತ್ತು ಸಲೀಂ ಮೊಹಮ್ಮದ್ ವಿರುದ್ಧ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯಡಿ ನಾರಾಯಣಿ ಎಂಬುವವರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕ್ರಿಮಿನಲ್ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು 42ನೆ ಎಸಿಸಿಎಂ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.ಈ ಪ್ರಕರಣವನ್ನು ಕಳೆದ ಮಾ.23ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಎಲ್ಲಾ ಆರೋಪಿಗಳಿಗೂ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News