''ರಾಜಕೀಯದಲ್ಲಿ ಮಹಿಳೆಯರಿಗೆ ಶೇ.50 ಪ್ರಾತಿನಿಧ್ಯ ವಿಧೇಯಕಕ್ಕೆ ಅನುಮತಿ ನೀಡಿ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು"
ಮೈಸೂರು,ಎ.14: ರಾಜ್ಯ ಶಾಸನ ಸಭೆಗಳು, ಸಂಸತ್ತಿನಲ್ಲಿ ಮಹಿಳೆಯರಿಗೆ ಸಮಾನ ರಾಜಕೀಯ ಪ್ರಾತಿನಿಧ್ಯ ನೀಡುವ ಕಾಯ್ದೆ ಈ ತನಕ ಮಂಡನೆಯಾಗಿಲ್ಲ. ಎಲ್ಲ ಪಕ್ಷಗಳ ನಾಯಕರುಗಳು ಈ ವಿದೇಯಕಕ್ಕೆ ಒಪ್ಪಿಗೆ ನೀಡಬೇಕೆಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಿ. ಆರ್. ಅಂಬೇಡ್ಕರ್ ಅವರ 131 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜಕೀಯದಲ್ಲಿ ಮಹಿಳೆಯರಿಗೆ ಶೇ. 50 ಪ್ರಾತಿನಿಧ್ಯ ನೀಡುವ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅನುಮತಿ ನೀಡಿ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು, ಶತಮಾನಗಳಿಂದಲೂ ಮಹಿಳೆಯರು ಎರಡನೇ ದರ್ಜೆಯವರಾಗಿದ್ದರು. ಅಂಬೇಡ್ಕರ್ ಅವರು ಮಹಿಳೆಯರಿಗೆ ಶಿಕ್ಷಣ, ಆಸ್ತಿ, ಅಧಿಕಾರ, ಸಮಾನ ಅವಕಾಶಗಳನ್ನು ಕಲ್ಪಿಸಲು ಹಿಂದೂ ಕೋಡ್ ಬಿಲ್ ಅನ್ನು ಮಂಡಿಸಿದರು. ಅದು ಮಂಡನೆಯಾಗದಿದ್ದಾಗ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು ಎಂದು ಅವರು ತಿಳಿಸಿದರು.
ದೇಶದ ಅನೇಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಭಾರತಾಂಬೆಯ ಪುತ್ರ ಅಂಬೇಡ್ಕರ್. ಆ ಮಹಾನ್ ನಾಯಕನನ್ನು ಒಂದು ಜಾತಿಯ ನಾಯಕನ್ನಾಗಿ ಕಂಡಿದ್ದೇವೆ. ಇದು ನಾವು ಅವರಿಗೆ ಮಾಡಿದ ದ್ರೋಹ, ಸತ್ಯಕ್ಕೆ ಎಸಗಿದ ಅಪಚಾರ ಎಂದು ನುಡಿದರು.
ಸ್ವಾತಂತ್ರ್ಯ ಪಡೆದ ನಂತರ ಅನೇಕ ಸಾಧನೆ ಮಾಡಿದ್ದೇವೆ, ಗಡಿಯೇ ಇರದ ಭಾರತಕ್ಕೆ ಒಂದು ಭೌಗೋಳಿಕ ಚೌಕಟ್ಟು ದೊರೆತಿದೆ. ಪಾಳೇಗಾರಿಕೆ ವಿರುದ್ಧ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಕಟ್ಟಿದ್ದೇವೆ. ಬಡತನ ನಿರ್ಮೂಲನೆ, ಶಿಕ್ಷಣದಲ್ಲಿ ಪ್ರಗತಿ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಸಂವಿಧಾನ ಜಾರಿಯಾದ ಮೇಲೆ ಜಾತಿ ವ್ಯವಸ್ಥೆ ಪೂರ್ಣವಾಗಿ ಧ್ವಂಸವಾಗಿಲ್ಲ, ನಿಜ. ಆದರೆ ಅದಕ್ಕೆ ಪೆಟ್ಟುಕೊಟ್ಟಿದ್ದೇವೆ. ಶೂದ್ರರು, ಮಹಿಳೆಯರು ರಾಷ್ಟ್ರಪತಿ, ಪ್ರಧಾನಿಯಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಅದರ ಬಗ್ಗೆ ಪೂರ್ಣವಾಗಿ ಜನರಿಗೆ ತಿಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರಾಜ್ಯದಲ್ಲೇ ನಂ.1 ಅಂಬೇಡ್ಕರ್ ಭವನ ಮೈಸೂರಿನಲ್ಲಿ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಅವಶ್ಯವಿರುವ 17 ಕೋಟಿ ರೂ. ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ. ಹೆಚ್ಚುವರಿ ಹಣದ ಅವಶ್ಯವಿದ್ದರೆ ಮೂಡಾ ಭರಿಸಲಿದೆ. ಇನ್ನೆರಡು ತಿಂಗಳಲ್ಲಿ ಭವನ ನಿರ್ಮಾಣದ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಸಮಸಮಾಜದ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒತ್ತು ನೀಡಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮುದಾಯದವರ ಕಲ್ಯಾಣಕ್ಕಾಗಿ ಹತ್ತುಹಲವು ಕಾರ್ಯಕ್ರಮಗಳನ್ನು ಬಜೆಟ್‍ನಲ್ಲಿ ಘೋಷಣೆ ಮಾಡಿ ಅದರ ಜಾರಿಗೆ ಮುಂದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ನವೋದ್ಯಮಕ್ಕೆ 50 ಲಕ್ಷ ರೂ. ಸಹಾಯಧನ ನೀಡುವ ಯೋಜನೆಯನ್ನು ಶೀಘ್ರ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಭೂ ಒಡೆತನ ಯೋಜನೆಯಡಿ ನೀಡಲಾಗುತ್ತಿದ್ದ 15 ಲಕ್ಷ ರೂ.ಧನಸಹಾಯವನ್ನು 20 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಸ್ವಯಂ ಉದ್ಯೋಗ ಸ್ಥಾಪಿಸಲು ಮುಂದಾಗುವವರಿಗೆ ಪ್ರತಿ ತಾಲೂಕಿನಲ್ಲಿ ಬಾಬು ಜಗಜೀವನ್ ರಾಂ ಸ್ವಯಂ ಉದ್ಯೋಗ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 8 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಮಾರ್ಗದರ್ಶನಿಯ ಮೂಲಕ ವಿಶೇಷ ತರಬೇತಿ ನೀಡುವ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ವರ್ಷದಿಂದಲೇ ವಸತಿ ಶಾಲೆಗಳಲ್ಲಿ ವಿಶೇಷ ತರಬೇತಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯವಿದ್ದು, ಹೆಚ್ಚಿನ ಅಂಕಗಳನ್ನು ಪಡೆದು, ಚಿನ್ನದ ಪದಕವನ್ನು ಗಳಿಸಿರುವ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಿಗೆ ವೇದಿಕೆಯ ಮೇಲೆ ಸನ್ಮಾನ ಮಾಡಲಾಯಿತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕ್ಯಾಮನಹಳ್ಳಿಯ ಕುಮಾರಿ ಕೆ.ಎಂ. ಪಲ್ಲವಿ ತರ್ಕಶಾಸ್ತ್ರ ವಿಭಾಗದಲ್ಲಿ 2 ಚಿನ್ನದ ಪದಕ ಹಾಗೂ 10 ನಗದು ಬಹುಮಾನಗಳನ್ನು ಪಡೆದಿದ್ದಾರೆ ಹಾಗೂ ಚಾಮರಾಜಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೆಗಾಲ ಗ್ರಾಮದ ಕುಮಾರಿ ವಿ. ತೇಜಸ್ವಿನಿ ಐಚ್ಛೀಕ ಕನ್ನಡ ವಿಭಾಗದಲ್ಲಿ 9 ಚಿನ್ನದ ಪದಕ ಮತ್ತು 10 ನಗದು ಬಹುಮಾನಗಳನ್ನು ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೈಸೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಸುನಂದಾ ಪಾಲನೇತ್ರ, ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷರಾದ ಎನ್.ವಿ.ಫಣೀಶ್, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಅಧ್ಯಕ್ಷ ಅಪ್ಪಣ್ಣ, ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಚೇತನ್, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ಅನೇಕ ಗಣ್ಯರು ಉಪ್ಥಿತರಿದ್ದರು.