×
Ad

'ಕಾಶ್ಮೀರ್ ಫೈಲ್ಸ್' ಸಿನೆಮಾ ವೀಕ್ಷಿಸಿ ಹಿಂತಿರುಗುತ್ತಿದ್ದವರಿಂದ ಯುವಕನ ಹತ್ಯೆ ವದಂತಿಯ ಸತ್ಯಾಸತ್ಯತೆ ಇಲ್ಲಿದೆ...

Update: 2022-04-15 20:37 IST

ಉತ್ತರ ಕನ್ನಡ: 'ಕಾಶ್ಮೀರ್ ಫೈಲ್ಸ್' ಸಿನೆಮಾ ವೀಕ್ಷಿಸಿ ಹಿಂತಿರುಗುತ್ತಿದ್ದವರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ  ಯುವಕನೋರ್ವನ ಹತ್ಯೆ ನಡೆಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದ್ದು, ಈ ಸುದ್ದಿಗೆ ಸಂಬಂಧಿಸಿ 'ವಾರ್ತಾ ಭಾರತಿ'  ಫ್ಯಾಕ್ಟ್ ಚೆಕ್ ನಡೆಸಿದೆ.

ಈ ಬಗ್ಗೆ ವಿವರ  ವಾರ್ತಾಭಾರತಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಹಾಗು ಸ್ಥಳೀಯರಲ್ಲಿ ಮಾಹಿತಿ ಸಂಗ್ರಹಿಸಿತು.   ಆಗ ಸಿಕ್ಕಿದ ಮಾಹಿತಿ ಇಲ್ಲಿದೆ : 

ದಿನಾಂಕ 13-4-2022ರಂದು ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಉತ್ತರ ಕನ್ನಡ ಜಿಲ್ಲೆ ತೇರಗಾಂ ಗ್ರಾಮದ ವಿಠೋಬಾ ದೇವಸ್ಥಾನ ಹತ್ತಿರ ಅಮಾನುಲ್ಲ ಇರ್ಫಾನ್ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಿ ಅದೇ ಗ್ರಾಮದ ಹೊನ್ನಪ್ಪ ಎಂಬಾತ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ಸಂಬಂಧ ಅಮಾನುಲ್ಲ  ತಂದೆ ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಹಲ್ಲೆ ನಡೆಸಿದ ಆರೋಪಿ ಹೊನ್ನಪ್ಪ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ಇನ್ನು ಹಲ್ಲೆಯಿಂದ ಗಾಯಗೊಂಡಿದ್ದ ಯುವಕ  ಅಮಾನುಲ್ಲ ಸದ್ಯ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿದ್ದು, ಆರೋಗ್ಯವಾಗಿದ್ದಾನೆ ಎಂದು ತಿಳಿದು ಬಂದಿದೆ. ಅಂದರೇ ವಾಟ್ಸ್ ಆಪ್ , ಫೇಸ್ ಬುಕ್ ಹಾಗು ಕೆಲವು ವೆಬ್ ಸೈಟ್ ಗಳಲ್ಲಿ ಬಂದಿರುವಂತೆ ಯಾವುದೇ ಯುವಕನ ಕೊಲೆಯಾಗಿಲ್ಲ. ಮತ್ತು ಹಲ್ಲೆ ಘಟನೆ ನಡೆದಿದ್ದರೂ ಅದಕ್ಕೂ ಸಿನಿಮಾಕ್ಕೂ ಯಾವುದೇ ಸಂಬಂಧ ಇರುವುದು ಸ್ಪಷ್ಟವಾಗಿಲ್ಲ. 

'ಒಂದು ವಾರದಿಂದ ಗ್ರಾಮ ದೇವಿ ಜಾತ್ರೆಯಲ್ಲಿ ನಾವೆಲ್ಲ ಹಿಂದೂ-ಮುಸ್ಲಿಮರು  ಯಾವುದೇ ಬೇಧ ಭಾವ ಇಲ್ಲದೆ ಭಾಗವಹಿಸುತ್ತಿದ್ದೇವೆ. ದೇವಸ್ಥಾನದ ಹತ್ತಿರ ನಡೆದ ಯುವಕನ ಮೇಲೆ ನಡೆದಿರುವ  ಹಲ್ಲೆ ಘಟನೆಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೂ ಯಾವುದೇ ಸಂಬಂಧ ಇಲ್ಲ' ಎಂದು ಸ್ಥಳೀಯರು ತಿಳಿಸಿದ್ದಾರೆ. 

ವೆಬ್ ಸೈಟ್  ವಿರುದ್ಧ ಪ್ರಕರಣ: ' ಹಿಂದೂ ಯುವಕ ಕಾಶ್ಮೀರಿ ಫೈಲ್  ಚಿತ್ರ ನೋಡಿ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ' ಎಂಬ ಶೀರ್ಷಿಕೆಯಡಿಯಲ್ಲಿ ಈ ಸುದ್ದಿಯನ್ನು ತಿರುಚಿ ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ ಎಂದು ಮೂರು ವೆಬ್ ಸೈಟ್ ಗಳ ವಿರುದ್ಧ ಹಳಿಯಾಳ ಪೊಲೀಸರು  ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News