ಈಶ್ವರಪ್ಪ ಮೇಲಿನ ಆರೋಪದಲ್ಲಿ ಸತ್ಯಾಂಶವಿಲ್ಲ, ಇದೆಲ್ಲವೂ ಕಾಂಗ್ರೆಸ್‍ನ ಷಡ್ಯಂತ್ರ: ಅರುಣ್ ಸಿಂಗ್

Update: 2022-04-15 15:48 GMT
ಅರುಣ್ ಸಿಂಗ್

ಹುಬ್ಬಳ್ಳಿ, ಎ. 15: ‘ಕೆ.ಎಸ್.ಈಶ್ವರಪ್ಪ ಮೇಲಿನ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದೆಲ್ಲವೂ ಪ್ರತಿಪಕ್ಷ ಕಾಂಗ್ರೆಸ್‍ನ ಷಡ್ಯಂತ್ರ. ಕಾಮಗಾರಿ ಗುತ್ತಿಗೆಯಲ್ಲಿ ಶೇ.40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂಬುದು ಅರ್ಥಹೀನ' ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಮುಖಂಡರು ಜನರಲ್ಲಿ ಗೊಂದಲ ಸೃಷ್ಟಿಸಿ, ಗೊಂದಲದಲ್ಲಿಯೇ ಬದುಕುತ್ತಾರೆ. ಶೇ.0ರಷ್ಟು ಕಮಿಷನ್ ಅನ್ನುವುದೇ ಗೊಂದಲದ ವಿಷಯ. ಗುತ್ತಿಗೆದಾರರ ಆರೋಪದ ಹಿಂದೆಯೂ ಕಾಂಗ್ರೆಸ್ ಕೈವಾಡವಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಸತ್ಯ ಬಹಿರಂಗವಾಗಲಿದೆ' ಎಂದು ಸ್ಪಷ್ಟಪಡಿಸಿದರು.

‘ಚುನಾವಣೆ ಸಮೀಪಿಸುತ್ತಿದ್ದಂತೆ ರಾಹುಲ್ ಗಾಂಧಿ ಮಂದಿರಕ್ಕೆ ಭೇಟಿ ನೀಡುತ್ತಾರೆ. ಉಳಿದ ವೇಳೆ ನಾಪತ್ತೆಯಾಗುತ್ತಾರೆ. ಕೋವಿಡ್ ವ್ಯಾಕ್ಸಿನ್ ಬಂದಾಗ ರಾಹುಲ್ ಗಾಂಧಿ ಮೋದಿ ವ್ಯಾಕ್ಸಿನ್ ಎಂದಿದ್ದರು. ನಂತರ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅದೇ ವ್ಯಾಕ್ಸಿನ್ ಪಡೆಯುತ್ತಾರೆ. ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದಾಗ ಕಾಂಗ್ರೆಸ್ ಗದ್ದಲ ಎಬ್ಬಿಸಿತ್ತು' ಎಂದು ಅವರು ದೂರಿದರು.

‘ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಾಳೆಯಿಂದ ಎರಡು ದಿನ ನಡೆಯಬೇಕಿರುವ ಬಿಜೆಪಿ ಕಾರ್ಯಕಾರಿಣಿಗೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳಲಿದ್ದಾರೆ. ಅವರ ಸ್ವಾಗತಕ್ಕೆ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಕಾರ್ಯಕಾರಿಣಿ ಪಕ್ಷದ ಕಾರ್ಯಕರ್ತರಿಗೆ ಉತ್ತೇಜನ ನೀಡಲಿದೆ' ಎಂದು ಅರುಣ್ ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News