‘ಜನತಾ ಜಲಧಾರೆ' ಎ.16ರಿಂದ ಆರಂಭ: ಕೆಆರ್ ಎಸ್‍ನಲ್ಲಿ ದೇವೇಗೌಡ, ಆಲಮಟ್ಟಿಯಲ್ಲಿ ಎಚ್‍ಡಿಕೆಯಿಂದ ಜಲಸಂಗ್ರಹ

Update: 2022-04-15 17:13 GMT

ಬೆಂಗಳೂರು, ಎ. 15: ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ ಮಾಡಿ ಜಾತ್ಯತೀತ ಜನತಾ ದಳ(ಜೆಡಿಎಸ್) ಹಮ್ಮಿಕೊಂಡಿರುವ ಜನತಾ ಜಲಧಾರೆ-ಗಂಗಾ ರಥಯಾತ್ರೆಗೆ ನಾಳೆಯಿಂದ(ಎ.16) ಚಾಲನೆ ಸಿಗಲಿದೆ. 

ಶನಿವಾವಾರ ಬೆಳಗ್ಗೆ 11 ಗಂಟೆಗೆ ರಾಜ್ಯದ 15 ಜೀವ ನದಿಗಳ ಪುಣ್ಯಜಲವನ್ನು ಕಲಶಕ್ಕೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಹದಿನೈದು ಗಂಗಾ ರಥಗಳು ನಿಗದಿತ ಸ್ಥಳಗಳನ್ನು ತಲುಪಿದ್ದು, ಆಯಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಶಾಸಕರು, ಕಾರ್ಯಕರ್ತರು ಅವುಗಳನ್ನು ಬರ ಮಾಡಿಕೊಂಡಿದ್ದಾರೆ. ನಾಳೆ ಬೆಳಗ್ಗೆ ವೇದ ಮಂತ್ರ ಘೋಷಣೆ, ಪೂಜೆ, ಮಂಗಳ ವಾದ್ಯಗಳ ಸದ್ದು, ಕಲಾ ತಂಡಗಳ ಮೆರವಣಿಗೆ, ಕಲಶ ಪೂಜೆ, ಪಕ್ಷದ ಕಾರ್ಯಕರ್ತೆಯರಿಂದ ಕಲಶ ಮೆರವಣಿಗೆ ಇತ್ಯಾದಿಗಳ ನಡುವೆ ಪುಣ್ಯಜಲವನ್ನು ಸಂಗ್ರಹ ಮಾಡಿಕೊಳ್ಳಲಾಗುವುದು. 

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಕಾವೇರಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಜಲಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಲ್ಲದೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಸನ ಜಿಲ್ಲೆಯ ಹೇಮಾವತಿಯಲ್ಲಿ, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಧದ ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಲಿದ್ದಾರೆ. ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಮೇಕೆದಾಟುನಲ್ಲಿ ಕಾವೇರಿ ನದಿ ನೀರು ಸಂಗ್ರಹ ಮಾಡಿಕೊಳ್ಳಲಿದ್ದಾರೆ.

ಒಟ್ಟು 94 ಕಡೆ ಜಲ ಸಂಗ್ರಹ: ಮೇ 8ರವರೆಗೂ ನಡೆಯಲಿರುವ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 94 ಕಡೆ ಜಲ ಸಂಗ್ರಹ ಮಾಡಲಾಗುವುದು. ರಾಜ್ಯದ ನೀರಾವರಿ ಯೋಜನೆಗಳನ್ನು ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತದ ಸರಕಾರ ಸಿಕ್ಕಿದರೆ 5 ವರ್ಷಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಕಚೇರಿಯಲ್ಲಿ ಡಿಜಿಟಲ್ ಪರದೆ: 15 ಕಡೆಗಳಲ್ಲಿ ನಾಯಕರೆಲ್ಲರೂ ಜಲ ಸಂಗ್ರಹ ಮಾಡುವ ನೇರ ದೃಶ್ಯಾವಳಿ ನೋಡಲು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೃಹತ್ ಡಿಜಿಟಲ್ ಪರದೆ ಅಳವಡಿಸಲಾಗಿದೆ. ಎಲ್ಲ ಪುಣ್ಯ ನದಿಗಳ ನೀರು ಸಂಗ್ರಹ ಮಾಡುವ ಪವಿತ್ರ ಕಾರ್ಯವು ಏಕಕಾಲದಲ್ಲಿ ನಡೆಯಲಿದ್ದು, ಆ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಜನತಾ ಜಲಧಾರೆ ನನ್ನ ರಾಜಕೀಯ ಜೀವನದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ 75 ವರ್ಷಗಳಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ಏಕೈಕ ಗುರಿಯೊಂದಿಗೆ ಜಲಧಾರೆ ಹಮ್ಮಿಕೊಂಡಿದ್ದೇವೆ ಎಂದು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News