ಸರಕಾರದ 'ಸಿಎಂ ನಿವಾಸ' ಬಿಜೆಪಿಗರ ಪಿತ್ರಾರ್ಜಿತ ಆಸ್ತಿಯೇ: ಕಾಂಗ್ರೆಸ್ ಪ್ರಶ್ನೆ

Update: 2022-04-15 19:34 GMT
ಸಿಎಂ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು 

ಬೆಂಗಳೂರು: 'ಭ್ರಷ್ಟ, ದೇಶದ್ರೋಹಿ, ಕೊಲೆಗಡುಕ ಈಶ್ವರಪ್ಪರನ್ನು ಬಂಧಿಸದೆ ಮದುವೆ ಗಂಡಿನ ರೀತಿ ಮೆರವಣಿಗೆ ಮಾಡಲು, ನಿಮ್ಮ ನಿವಾಸದೆದುರು 'ಭ್ರಷ್ಟರ ಜಾತ್ರೆ' ಮಾಡಲು ಅವಕಾಶ ಕೊಟ್ಟಿದ್ದೀರಲ್ಲ ನಾಚಿಕೆ ಎನಿಸುವುದಿಲ್ಲವೇ? ಸರ್ಕಾರದ 'ಸಿಎಂ ನಿವಾಸ' ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವೇ ಅಥವಾ ಬಿಜೆಪಿಗರ ಪಿತ್ರಾರ್ಜಿತ ಆಸ್ತಿಯೇ?' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನಿಸಿದೆ. 

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ,ನಿನ್ನೆ ನಮ್ಮ ನಾಯಕರು ಸಿಎಂ ನಿವಾಸದೆದುರು ಪ್ರತಿಭಟಿಸಲು ಅವಕಾಶ ನೀಡದೆ ಬಂಧಿಸಲಾಗಿತ್ತು. ಆದರೆ ಇಂದು ಸಿಎಂ ನಿವಾಸದೆದುರು ಪ್ರತಿಭಟಿಸಿದ ಈಶ್ವರಪ್ಪನವರ ಬೆಂಬಲಿಗರನ್ನು ಬಂಧಿಸಿಲ್ಲವೇಕೆ? ಈ ಬಗ್ಗೆ ಪೊಲೀಸ್ ಅಧಿಕಾರಿಗಳು, ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಎಂ ಬೊಮ್ಮಾಯಿ ಅವರು ಉತ್ತರಿಸಬೇಕು. ಕಾನೂನು, ನಿಯಮ ಪಕ್ಷದ ಆಧಾರದ ಮೇಲೆ ಹಾಗೂ ಸಮಯಕ್ಕೆ ತಕ್ಕಂತೆ ಬದಲಾಗುತ್ತದೆಯೇ?' ಎಂದು ವಾಗ್ದಾಳಿ ನಡೆಸಿದೆ. 

'ಇದ್ಯಾವ ಡಬಲ್ ಸ್ಟ್ಯಾಂಡರ್ಡ್ ನಿಮ್ಮದು? ನಿನ್ನೆ ಸಿಎಂ ನಿವಾಸದೆದುರಿನ ನಮ್ಮ ಪ್ರತಿಭಟನೆಯನ್ನ ಅರ್ಧ ದಾರಿಗೆ ತಡೆದು, ನಮ್ಮ ನಾಯಕರನ್ನು ಬಂಧಿಸಲಾಗಿತ್ತು. ಆದರೆ ಇಂದು ನಿಮ್ಮ ನಿವಾಸದೆದುರು ಭ್ರಷ್ಟ ಈಶ್ವರಪ್ಪರನ್ನ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಪೊಲೀಸರಿಲ್ಲ, ತಡೆಯೂ ಇಲ್ಲ, ಬಂಧನವೂ ಇಲ್ಲ!' ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಗಾರಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News