ರಮೇಶ್ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಮಾತಿನ ಸಮರ

Update: 2022-04-15 19:32 GMT

ಬೆಳಗಾವಿ, ಎ.15: ನಾನು ನನ್ನ ಕ್ಷೇತ್ರದಲ್ಲಿ ಕಾರ್ಯಾದೇಶವಿಲ್ಲದೆ ಹತ್ತತ್ತು ಕೋಟಿ ರೂಪಾಯಿ ಕೆಲಸ ಮಾಡಿಸುತ್ತೀನಿ ಎಂದು ಗೋಕಾಕ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಮತ್ತೊಂದು ಕಡೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾರ್ಯಾದೇಶ ಪತ್ರವಿಲ್ಲದೆ, ಆಡಳಿತಾತ್ಮಕ–ತಾಂತ್ರಿಕ ಅನುಮೋದನೆ ಇಲ್ಲದೆ, ಟೆಂಡರ್ ಆಗದೆ ಗುತ್ತಿಗೆದಾರ ಸಂತೋಷ್ ಪಾಟೀಲ ಅವರಿಂದ ಕೆಲಸ ಮಾಡಿಸಿದವರಾರು ಎಂದು ಪ್ರಶ್ನಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ ತಾಲೂಕಿನ ಬಡಸ ಕೆ.ಎಚ್. ಗ್ರಾಮದಲ್ಲಿ ಬೆಳಗಾವಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ ಅವರು, ನಾನೂ ಗೋಕಾಕ ಕ್ಷೇತ್ರದಲ್ಲಿ ಕಾರ್ಯಾದೇಶವಿಲ್ಲದೆ ಹತ್ತತ್ತು ಕೋಟಿ ರೂಪಾಯಿ ಕೆಲಸ ಮಾಡಿಸುತ್ತೀನಿ. ಕೆಳಗಿನಿಂದ ಮೇಲಿನವರೆಗೂ ಹೋಗಬೇಕಾಗುತ್ತದೆ. ನಂತರ ಬಿಲ್ ಕೊಡುತ್ತಾರೆ. ಸಂತೋμï ತನ್ನ ಮನೆ ಕೆಲಸವನ್ನೇನೂ ಮಾಡಿಕೊಂಡಿಲ್ಲ. ಜಾತ್ರೆ ವೇಳೆ ಗ್ರಾಮದ ಕೆಲಸ ಮಾಡಿದ್ದಾನೆ ಎಂದು ತಿಳಿಸಿದರು.

ಇಲಾಖೆಗಳ ಕಾರ್ಯಾದೇಶ ಪತ್ರ ಸಿಗುವ ಮೊದಲೇ ಅಥವಾ ಟೆಂಡರ್ ಕರೆಯದೆ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳುವ ವ್ಯವಸ್ಥೆ ಹೊಸದೇನಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಹೀಗೆಯೇ ನಡೆಯುತ್ತದೆ ಎಂದು ಅವರು ಹೇಳಿದರು. 

ವಾರದ ಹಿಂದೆ, ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಫೋನ್ ಮಾಡಿದ್ದನಂತೆ. ಸಾಹುಕಾರ್ (ನಾನು) ಮಂತ್ರಿ ಆಗುತ್ತಾರೆ. ಆಗ ಎಲ್ಲವೂ ಸರಿಯಾಗಲಿದೆ. ನನಗೇನು ಭಯ ಎಂದು ಖುಷಿಯಿಂದ ಹೇಳಿದ್ದನಂತೆ. ಅವನ ಸಾವು ಪ್ರಶ್ನೆಯಾಗಿಯೇ ಉಳಿದಿದೆ. ಪ್ರಕರಣದ ಸಮಗ್ರ ತನಿಖೆ ಆಗಬೇಕು ಎಂದು ರಮೇಶ್ ಹೇಳಿದರು.

ಕೆಲವು ದಿನಗಳ ಹಿಂದೆ ಸಂತೋಷ್ ಪಾಟೀಲ ನನಗೆ ಕರೆ ಮಾಡಿದ್ದ. ಇವೆಲ್ಲವೂ ಅಕ್ರಮ ಕೆಲಸಗಳಿವೆ. ಟಿವಿಗಳ ಮುಂದೆ ಹೋಗಬೇಡ. ಆಗುವುದೂ ಇಲ್ಲ. ನಿನ್ನ ದುಡ್ಡನ್ನು ಪಡೆದುಕೊಳ್ಳುವುದರತ್ತ ನೋಡಿಕೋ ಎಂದು ತಿಳಿಸಿದ್ದೆ ಎಂದು ಹೇಳಿದರು. 

ರಮೇಶ್ ಜಾರಕಿಹೊಳಿ ಮಾತಿಗೆ ತಿರುಗೇಟು ನೀಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು , ಕಾರ್ಯಾದೇಶ ಪತ್ರವಿಲ್ಲದೆ, ಆಡಳಿತಾತ್ಮಕ–ತಾಂತ್ರಿಕ ಅನುಮೋದನೆ ಇಲ್ಲದೆ, ಟೆಂಡರ್ ಆಗದೆ ಗುತ್ತಿಗೆದಾರ ಸಂತೋಷ್ ಪಾಟೀಲ ಅವರಿಂದ ಕೆಲಸ ಮಾಡಿಸಿದವರಾರು? ಯಾರ ಕುಮ್ಮಕ್ಕಿತ್ತು, ಒತ್ತಡವಿತ್ತು. 4 ಕೋಟಿ ಕೆಲಸವನ್ನು ಯಾರ ಆಶ್ವಾಸನೆ ಮೇಲೆ ಮಾಡಿದ್ದಾರೆ? ನಾನು ಕ್ಷೇತ್ರದ ಶಾಸಕಿ ಇರಬಹುದು. ಆದರೆ, ಅಕ್ಕನಿಗೆ ಸಹಾಯ ಆಗಲೆಂದೇನೂ ಅವರು ಕೆಲಸ ಕೈಗೊಂಡಿಲ್ಲ. ಊರಿನ ಅಭಿವೃದ್ಧಿಗೆ, ಪಕ್ಷಕ್ಕೆ ಮತ್ತು ಆಗಿನ ಜಿಲ್ಲಾ ಉಸ್ತುವಾರಿ ಸಚಿವ (ರಮೇಶ ಜಾರಕಿಹೊಳಿ)ರಿಗೆ ಹೆಸರು ಬರಲೆಂದು ಮಾಡಿದ್ದಾರೆ ಎಂದು ಆರೋಪಿಸಿದರು.

ಸಂತೋಷ್ ಕೆಲಸ ಮಾಡಿದಾಗ ರಮೇಶ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದರು. ನಾನು ಸಂತೋಷ್ ಕರೆಸಿ ವಿಚಾರಿಸಲು ಹಲವು ಬಾರಿ ಪ್ರಯತ್ನಿಸಿದ್ದೆ. ಅವನು ಬಂದಿರಲಿಲ್ಲ. ನಾನು ಬಿಜೆಪಿ, ಬಿಜೆಪಿ ಎನ್ನುತ್ತಿದ್ದ. ರಮೇಶ ಬೆಂಬಲಿಗ ಎನ್ನುತ್ತಿದ್ದ. ಕಾಮಗಾರಿ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎನ್ನುವುದು ಸರಿಯಲ್ಲ. ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷರ ವಿರುದ್ಧವೂ ತನಿಖೆಯಾಗಲಿ’ ಎಂದರು.

ಮಹಾನಾಯಕನ ಬಗ್ಗೆ ವಿವರ ನೀಡಿ: ಲಕ್ಷ್ಮಿ ಹೆಬ್ಬಾಳಕರ್

ನನ್ನ ವಿರುದ್ಧದ ಸೀಡಿ ಹಾಗೂ ಸಂತೋಷ್ ಆತ್ಮಹತ್ಯೆ ಪ್ರಕರಣದ ಹಿಂದೆ ಷಡ್ಯಂತ್ರ ಮಾಡಿರುವ ಮಹಾನಾಯಕನ ಬಗ್ಗೆ ಶೀಘ್ರವೇ ವಿವರ ನೀಡುತ್ತೇನೆ ಎಂಬ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು, ಸೀಡಿ ಪ್ರಕರಣದ ಹಿಂದೆ ಯಾರಿದ್ದಾರಂತೆ? ಅದನ್ನು ಮೊದಲು ಬಿಚ್ಚಿಡಲಿ. ಏನಾದರೂ ದಾಖಲೆಗಳಿದ್ದರೆ ಜನರನ್ನು ಕಾಯಿಸುವುದು ಬೇಡ. ತಕ್ಷಣವೇ ಬಿಡುಗಡೆ ಮಾಡಬೇಕು. ಬೇಜವಾಬ್ದಾರಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News