ಶಿವಮೊಗ್ಗ ಗಲಭೆ ವೇಳೆ ಯುವಕನ ಹತ್ಯೆಗೆ ಸಂಚು ಆರೋಪ; 13 ಮಂದಿ ವಿರುದ್ಧ ಪ್ರಕರಣ ದಾಖಲು
ಶಿವಮೊಗ್ಗ, ಎ.16: ಶಿವಮೊಗ್ಗದಲ್ಲಿ ಮುಸ್ಲಿಮ್ ಯುವಕನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಹರ್ಷ ಹತ್ಯೆ ಪ್ರಕರಣದ ಬಳಿಕ ಉಂಟಾಗಿದ್ದ ಗಲಭೆಗೆ ಸಂಬಂಧಿಸಿ ಬಂಧಿತ ಯುವಕನೋರ್ವ ವಿಚಾರಣೆ ವೇಳೆ ನೀಡಿದ ಮಾಹಿತಿಯನ್ನು ಆಧರಿಸಿ 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
13 ಮಂದಿ ವಿರುದ್ಧ ಕೇಸ್
ಗಲಭೆಗೆ ಸಂಬಂಧಿಸಿ ಬಂಧಿತ ಆರೋಪಿ ರಾಖಿ ಎಂಬಾತ ವಿಚಾರಣೆ ವೇಳೆ ಮುಸ್ಲಿಮ್ ಯುವಕನ ಹತ್ಯೆಗೆ ಸಂಚು ರೂಪಿಸಿದ್ದ ಕುರಿತು ಬಾಯಿ ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ರಾಖಿ ಸೇರಿದಂತೆ ಶಿವಮೊಗ್ಗದ 13 ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಖಿ ಸಿಕ್ಕಿಬಿದ್ದಿದ್ದು ಹೇಗೆ?
ಫೆ.21ರಂದು ಪೂರ್ವಾಹ್ನ 11:30ಕ್ಕೆ ಸೀಗೆಹಟ್ಟಿಯಲ್ಲಿ ಪತ್ರಕರ್ತ ಮುಹಮ್ಮದ್ ರಫಿ ಎಂಬವರ ಮೇಲೆ ಗುಂಪೊಂದು ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ರಾಖಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು. ಆಗ ಮುಸ್ಲಿಮ್ ಯುವಕನ ಹತ್ಯೆಗೆ ಸಂಚು ರೂಪಿಸಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಎಫ್ಐಆರ್ ದಾಖಲು ಮಾಡಲಾಗಿದೆ.
ಈ ಬಗ್ಗೆ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.