×
Ad

ರಘುರಾಮ ಶೆಟ್ಟರನ್ನು ಮರೆಯುತ್ತಿರುವುದು ದುರ್ದೈವದ ಸಂಗತಿ: ದೇವನೂರ ಮಹಾದೇವ

Update: 2022-04-16 17:29 IST

ಬೆಂಗಳೂರು: ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದ ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿ ಅವರನ್ನು ಬಂಟರೂ ಸೇರಿದಂತೆ ತಳಸಮುದಾಯದವರು ನೆನಪಿಸಿಕೊಳ್ಳದಿರುವುದು ದುರ್ದೈದ ಸಂಗತಿ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಬೇಸರ ವ್ಯಕ್ತಪಡಿಸಿದರು.

ಶನಿವಾರ ನಗರದ ಕುಮಾರಕೃಪಾದಲ್ಲಿರುವ ಗಾಂಧಿಭವನ ಸಭಾಂಗಣದಲ್ಲಿ ಜನನುಡಿ ಬಳಗ ಮತ್ತು ಅಹರ್ನಿಶಿ ಪ್ರಕಾಶನ ಸಹಯೋಗದೊಂದಿಗೆ ಆಯೋಜಿಸಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಸಂಪಾದನೆಯ ಮುಂಗಾರು ಪತ್ರಿಕೆಯ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟರ ಬರೆಹಗಳ ಸಂಕಲನ ‘ಬೇರೆಯೇ ಮಾತು’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಘುರಾಮಶೆಟ್ಟರು ಪ್ರಜಾವಾಣಿಯಲ್ಲಿ ಇದ್ದಾಗಿಲಿಂದಲೂ, ಮುಂಗಾರು ಪತ್ರಿಕೆ ನಡೆಸುತ್ತಿರುವಾಗಲೂ ನನಗೆ ಗೊತ್ತು. ಇವತ್ತು ಅವರು  ಕಣ್ಮರೆಯಾಗುತ್ತಿರುವ ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದರು. ದಲಿತರು, ಹಿಂದುಳಿದ, ಹಳ್ಳಿಗರು, ಅಸಹಾಯಕರು ಎಲ್ಲ ಕ್ಷೇತ್ರಗಳಲ್ಲಿ ಭಾಗವಹಿಸುವಂತಾಗಬೇಕೆಂದು ತಹತಹಿಸುತ್ತಿದ್ದರು. ಇದನ್ನೇ ತನ್ನ ಕಾರ್ಯಕ್ಷೇತ್ರದಲ್ಲೂ ಅಳವಡಿಸಿಕೊಂಡಿದ್ದ ಅವರನ್ನು ನೆನಪಿಸಿಕೊಳ್ಳುತ್ತಿಲ್ಲ, ಇದೊಂದು ನನಗೆ ಸಂಕಟ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯವರು ವಿದ್ಯಾವಂತರು, ಬುದ್ಧಿವಂತರು ಎಂಬ ಮಾತು ನಮ್ಮ ಕಡೆ ಪ್ರಚಲಿತವಿದೆ. ಜೊತೆಗೆ ಇದು ಭೂತಾರಾಧನೆ, ಯಕ್ಷಗಾನದ ನೆಲ. ಇಲ್ಲಿನವರಿಗೆ ರಘುರಾಮಶೆಟ್ಟರ ‘ಮುಂಗಾರು’ ಪತ್ರಿಕೆ ಸಾಹಸ ಹೇಗೆ ಕಾಣಿಸಬಹುದು ಎಂಬ ಕುತೂಹಲ ನನಗಿತ್ತು ಎಂದ ಅವರು,  ಶೆಟ್ಟರು ನಾಯಕನೊ ಅಥವಾ ದುರಂತ ನಾಯಕನೊ ಗೊತ್ತಿಲ್ಲ. ಒಂದು ದೊಡ್ಡ ಕನಸನ್ನು ಕಂಡು ಅದಕ್ಕೊಂದು ಮನೆ ಕಟ್ಟಿ, ಆ ಮನೆಯ ಭಾರವನ್ನು ಹೊತ್ತು, ಅದು ಕುಸಿಯುತ್ತಿದ್ದರೂ ಛಲ ಬಿಡದೆ ನೆಲಕಚ್ಚುತ್ತಾರಲ್ಲ ಇದನ್ನು ನೋಡಿದರೆ ದುರಂತ ನಾಯಕ ಎಂದೆನ್ನಿಸುತ್ತದೆ ಎಂದು ದೇವನೂರ ನುಡಿದರು.

ಅದು ಅಲ್ಲದೆ, ಅದೇ ಆ ಕ್ಷಣದಲ್ಲೆ, ಈ ವಡ್ಡರ್ಸೆ ರಘುರಾಮಶೆಟ್ಟಿ ಎಂಬ ಸಾಹಸಿಗ ‘ಮುಂಗಾರು’ ಪ್ರಕಾಶನ ಸಂಸ್ಥೆ ಎಂಬ ಓದುಗರೇ ಮಾಲಕರಾಗಿದ್ದ ಪಬ್ಲಿಕ್ ಲಿಮಿಡೆಟ್ ಕಂಪೆನಿ ರಚಿಸಿ, ಓದುಗರ ಒಡೆತನದ ಸಂಸ್ಥೆ ಕಟ್ಟುತ್ತಾರಲ್ಲ ಇದು ಇಂದು ಮಾಡಬೇಕಾಗಿರುವ ಸಾಹಸವಾಗೇ ಉಳಿದಿದೆ. ಈ ಸಂಪತ್ತನ್ನು ರಘುರಾಮಶೆಟ್ಟರು ನಾಡಿಗೆ ಬಿಟ್ಟು ಹೋಗಿದ್ದಾರೆ ಎಂದು ಅವರು ಬಣ್ಣಿಸಿದರು.

ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ಕನಸುಗಾರಿಕೆ, ಆದರ್ಶ ಕಳೆದುಕೊಂಡ ಇಂದಿನ ಕಾಲದಲ್ಲಿ ಮುಂಗಾರು ಪತ್ರಿಕೆಯನ್ನು ನೆನಪು ಮಾಡಿಕೊಳ್ಳುವ ಅವಶ್ಯಕತೆ ಇದೆ. ಉದ್ಯಮಿಗಳ ನೆರವು ಇಲ್ಲದೆಯೇ ರಾಘುರಾಮರು ಸಾಹಸ ಮಾಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಖಕ ಕೆ.ಪುಟ್ಟಸ್ವಾಮಿ, ರಘುರಾಮ ಅವರ ಮಾತುಗಳನ್ನು ಕೇಳುವುದೇ ಒಂದು ಆದರ್ಶವಾಗಿತ್ತು.ದಮನಿತ ಶಕ್ತಿಗಳನ್ನು ಬೆಂಬಲಿಸುವ ಪತ್ರಿಕೋದ್ಯಮಕ್ಕೆ ಎಂದಿಗೂ ಬದ್ಧವಾಗಿರಬೇಕು ಎಂದು ಪದೇ ಪದೇ ಅವರು ಹೇಳುತ್ತಿದ್ದರು ಎಂದು ನೆನಪಿಸಿದರು.

ಕಾಯ್ದೆ ತಿದ್ದುಪಡಿ: ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಪಕ್ಷಾಂತರ ನಿಷೇಧ ಕಾಯ್ದೆ ಇದ್ದರೂ ಸಹ ಈ ಹಿಂದೆಗಿಂತಲೂ ಅಧಿಕ ಪಕ್ಷಾಂತರ ಚಟುವಟಿಕೆಗಳು ಕಳ್ಳದಾರಿಯಲ್ಲಿ ನಡೆಯುತ್ತಿದೆ. ಇದಕ್ಕೆ ಸೂಕ್ತ ರೀತಿಯಲ್ಲಿ ಕಠಿವಾಣ ಹಾಕಬೇಕು.ಅದಕ್ಕೆ ಯಾರಾದರೂ ಓರ್ವ ಜನಪ್ರತಿನಿಧಿ ಒಂದು ಪಕ್ಷದಿಂದ ಗೆದ್ದು, ಅಧಿಕಾರಕ್ಕೆ ಬಂದ ನಂತರವೂ, ಆತ ಆಮಿಷಕ್ಕೆ ಒಳಗಾಗಿ ಮತ್ತೊಂದು ಪಕ್ಷಕ್ಕೆ ಸೇರ್ಪಡೆ ಆಗುವ ಮುಂಚೆ ರಾಜೀನಾಮೆ ನೀಡಿದಾಗ, ಮುಂದಿನ ಎರಡು ಚುನಾವಣೆಗಳಲ್ಲಿ ಆತನಿಗೆ ಸ್ಪರ್ಧಿಸದಂತೆ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಹೋರಾಟಗಾರ ಅನಂತ್ ನಾಯ್ಕ್, ಲೇಖಕಿ ಅಕ್ಷತಾ ಹುಂಚದಕಟ್ಟೆ  ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News