×
Ad

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ

Update: 2022-04-16 18:22 IST
ಸಚಿವ ಮುರುಗೇಶ್ ನಿರಾಣಿ

ಬಾಗಲಕೋಟೆ: ‘ನನ್ನ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಅನುದಾನ ತಂದಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎನ್ನುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಾಲ್ಕು ಕೋಟಿ ರೂಪಾಯಿ ಕೆಲಸ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್‍ಗೆ ಏಕೆ ಬೆಂಬಲ ನೀಡಲಿಲ್ಲ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಇಲ್ಲಿನ ಇಳಕಲ್ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಿಮ್ಮದೆ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿದ್ದ ಸಂತೋಷ್ ಪಾಟೀಲ್‍ಗೆ ನೀವು ಸಹಕಾರ ಕೊಟ್ಟಿದ್ದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ತಾವೊಬ್ಬ ರಾಷ್ಟ್ರೀಯ ನಾಯಕರು ಎಂದು ಹೇಳಿಕೊಂಡು ತಿರುಗಾಡುತ್ತೀರಿ. ನೀವು, ಇದನ್ನ ಸರಿಯಾದ ರೀತಿಯಿಂದ ನಿರ್ವಹಣೆ ಮಾಡಬೇಕಿತ್ತು. ನಿಮ್ಮ ಕ್ಷೇತ್ರದಲ್ಲಿ ಕೆಲಸ ಆಗಿದ್ದಾಗ ನೀವೇ ಅವರನ್ನ ಕರೆದುಕೊಂಡು ಹೋಗಿ ಬಿಲ್ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು' ಎಂದು ಸಲಹೆ ನೀಡಿದರು.

‘ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ನಿಮ್ಮ ಗಮನಕ್ಕೆ ಬಂದ ಕೂಡಲೇ ಹಣ ಬಿಡುಗಡೆ ಮಾಡಿಕೊಡುವ ಕೆಲಸವನ್ನು ಮಾಡಬೇಕಿತ್ತು. ಸಂತೋಷ್ ಪಾಟೀಲ್ ಕಷ್ಟದಲ್ಲಿ ಇರುವುದು ನಿಮಗೆ ಗೊತ್ತಿತ್ತು. ನೀವು ಏಕೆ ಸಹಾಯ ಮಾಡಿಲ್ಲ. ಸಾವಿರಾರು ಕೋಟಿ ರೂ.ತರುವ ನಿಮಗೆ 4 ಕೋಟಿ ರೂ. ಹೊರೆಯಾಗುತ್ತಿರಲಿಲ್ಲ. ನಾಲ್ಕು ಕೋಟಿ ರೂ.ಕೊಡಿಸಲು ಆಗದಿರುವ ನೀವು ಅದರ ನೈತಿಕ ಹೊಣೆಗಾರಿಕೆಯನ್ನು ನೀವೇ ಹೊರಬೇಕು ಎಂದು ಅವರು ಕಿಡಿಕಾರಿದರು.

ಘಟನೆ ನಡೆದ ಬಳಿಕ ಶವ ಇಟ್ಟುಕೊಂಡು ರಾಜಕೀಯ ಮಾಡುವ ಪ್ರಯತ್ನ ಮಾಡಿದರು. ಸಂತೋಷ ಮನೆಯವರು ಹಾಗೂ ಅವರ ಗ್ರಾಮದವರು ಆಸ್ಪದ ಕೊಟ್ಟಿಲ್ಲ. ಅಲ್ಲದೆ ಅಂತ್ಯ ಸಂಸ್ಕಾರ ಮಾಡುವ ಸಂದರ್ಭದಲ್ಲೂ ಶವವನ್ನು ವಸ್ತುಪ್ರದರ್ಶನ ಮಾಡಲು ಹೊರಟಿದ್ದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿದರು.

‘ಪ್ರಕರಣ ಕುರಿತು ಈಗಾಗಲೇ ಎಫ್‍ಐಆರ್ ಆಗಿದೆ. ನಮ್ಮ ಪೊಲೀಸ್ ಇಲಾಖೆಯವರು ಶಕ್ತರಿದ್ದಾರೆ. ಬರುವ ದಿನದಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ. ಸರಕಾರ ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆರೋಪ ಮಾಡಿದ ತಕ್ಷಣ ಬಂಧಿಸಬೇಕು ಎಂಬುದು ಸರಿಯಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಸಚಿವ  ಈಶ್ವರಪ್ಪ ಅವರೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News