ಈಶ್ವರಪ್ಪರನ್ನು ಬಂಧಿಸಿ ಏನು ಮಾಡ್ತೀರಿ: ಕಾಂಗ್ರೆಸ್ ಮುಖಂಡರಿಗೆ ಕುಮಾರಸ್ವಾಮಿ ಪ್ರಶ್ನೆ

Update: 2022-04-16 13:13 GMT
ಎಚ್.ಡಿ. ಕುಮಾರಸ್ವಾಮಿ

ವಿಜಯಪುರ, ಎ.16: ‘ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡರು ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಅವರನ್ನು ಬಂಧಿಸಿ ಏನು ಮಾಡುತ್ತಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಶನಿವಾರ ಇಲ್ಲಿನ ಆಲಮಟ್ಟಿಯ ಕೃಷ್ಣ ನದಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ನೀರು ಸಂಗ್ರಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಧರ್ಮ-ಧರ್ಮಗಳ ಯುದ್ಧ ನಡೆಯುತ್ತಿದ್ದಾಗ ಕಾಂಗ್ರೆಸ್ ಮುಖಂಡರು ಮನೆಯಲ್ಲಿ ಕುಳಿತಿದ್ದರು. ಇದೀಗ ಈಶ್ವರಪ್ಪ ವಿಚಾರ ಮುಂದಿಟ್ಟುಕೊಂಡು ಬೀದಿಗೆ ಇಳಿದಿದ್ದಾರೆ. ಅಂದು ಏಕೆ ಬೀದಿಗೆ ಇಳಿಯಲಿಲ್ಲ' ಎಂದು ಕೇಳಿದರು.

ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ? ಗೃಹ ಸಚಿವರ ಬಂಧನ ಮಾಡಲಾಗಿತ್ತೇ? ಸರಕಾರದ ನಡುವಳಿಕೆಗೆ ಬೇಸತ್ತು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನೂ ಕಾಂಗ್ರೆಸ್ ಮುಖಂಡರಿಗೆ ಮುಂದಿನ ಚುನಾವಣೆಯ ಸಲುವಾಗಿ ಮಾತನಾಡಲು ವಿಷಯವೇ ಇಲ್ಲ. ಹೀಗಾಗಿ, ಆತ್ಮಹತ್ಯೆ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ' ಎಂದು ಕುಮಾರಸ್ವಾಮಿ ಟೀಕಿಸಿದರು.

ಆತ್ಮಹತ್ಯೆಯ ಹಿಂದೆ ಮಹಾನಾಯಕರಿದ್ದಾರೋ, ದುರಂತ ನಾಯಕರಿದ್ದಾರೋ, ಯಾವ ಕಳ್ಳ ನಾಯಕರೋ ನನಗೆ ಗೊತ್ತಿಲ್ಲ. ಸರಕಾರ ಪ್ರಕರಣದ ವಾಸ್ತವಾಂಶವನ್ನು ಜನರ ಮುಂದಿಡಬೇಕು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮೂಲ ಕಾರಣವೇನು ಎಂದು ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News