ಸಂತೋಷ್ ಪಾಟೀಲ್ ಆತ್ಮಹತ್ಯೆಯ ಬಗ್ಗೆ ನನಗೆ ಅನುಮಾನ ಶುರುವಾಗಿದೆ: ಕೆ.ಎಸ್. ಈಶ್ವರಪ್ಪ

Update: 2022-04-16 14:18 GMT
ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಸಂತೋಷ್ ಪಾಟೀಲ್ ಆತ್ಮಹತ್ಯೆಯ ಬಗ್ಗೆ ನನಗೆ ಅನುಮಾನ ಶುರುವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಅನ್ನೋದು ಎಲ್ಲರ ಅಭಿಪ್ರಾಯ. ತಪ್ಪು ಮಾಡಿದವರು ಹೊರಗೆ ಬರಬೇಕು. ಈ ಷಡ್ಯಂತ್ರದ ರೂವಾರಿಗಳು ಯಾರು? ವ್ಯಕ್ತಿಯೋ, ಸಂಸ್ಥೆಯೋ, ಪಕ್ಷವೋ ಎಂದು ಹೊರಗೆ ಬರಬೇಕು. ಆಗ ನಿಜಕ್ಕೂ ಮೃತ ಸಂತೋಷ್ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದರು.

ಆ ಮೃತ ಹುಡುಗನ ಬಗ್ಗೆ ನನಗೂ ಒಂದು ರೀತಿಯ ಕರುಣೆಯಿದೆ. ಆ ಹುಡುಗನನ್ನು ಯಾರಾದರೂ ದುರುಪಯೋಗ ಮಾಡಿಕೊಂಡರೇ ಎಂಬ ಬಗ್ಗೆ ತನಿಖೆ ಆದ ನಂತರವೇ ಹೊರ ಬರಲಿದೆ. ಈ ಬಗ್ಗೆ ನ್ಯಾಯ ಹೊರಗೆ ಬರಬೇಕು ಎಂದರು.

ಒಪ್ಪಿಗೆ ಪಡೆದು ರಾಜೀನಾಮೆ: ಇಡೀ ರಾಜ್ಯದ ಜನ, ನನ್ನ ಕ್ಷೇತ್ರದಲ್ಲಿ ಗೆಲ್ಲಿಸಿದ ಜನ ನಮ್ಮ ಪರಿವಾರದ ಹಿರಿಯರು, ರಾಜ್ಯ ಹಾಗೂ ರಾಷ್ಟ್ರದ ನಾಯಕರು, ಮಂತ್ರಿಗಳು, ಶಾಸಕರು ಯಾರಿಗೂ ಕೂಡಾ ಇರಿಸುಮುರಿಸು ಆಗಬಾರದೆಂದು ಎಲ್ಲಾ ಹಿರಿಯರ ಒಪ್ಪಿಗೆ ಪಡೆದು ರಾಜೀನಾಮೆ ಕೊಟ್ಟಿದ್ದೇನೆ ಎಂದರು.

ರಾಜೀನಾಮೆ ಕೊಡುವ ವೇಳೆ ಬಲಪ್ರದರ್ಶನ ಅಲ್ಲ. ನಾನು ರಾಜೀನಾಮೆ ಕೊಡುತ್ತೇನೆಂದು ಹೇಳಿದಾಗ ನನ್ನ ಜೊತೆ ಬರುತ್ತೇನೆ ಎಂದಿದ್ದರು. ಅವರ ಅಭಿಮಾನ, ಸ್ನೇಹ, ಬಾಂಧವ್ಯ, ಬೆಂಗಳೂರಿನವರೆಗೆ ಬಂದು ಬೆಂಬಲ ಕೊಟ್ಟಿದ್ದು ನನಗೂ ಸಂತೋಷವಾಗಿದೆ ಎಂದರು.

ರಾಜ್ಯದಲ್ಲಿ ಎಲ್ಲರೂ ನನಗೆ ಬೆಂಬಲ ಕೊಡುತ್ತಿದ್ದಾರೆ. ಒಂದೇ ಒಂದು ನನ್ನ ಬಗ್ಗೆ ಒಡಕು ಧ್ವನಿ ಇಲ್ಲ. ಎಲ್ಲರದ್ದು ಒಂದೇ ಧ್ವನಿ, ಇದರಲ್ಲಿ ನಿಮ್ಮ ಯಾವುದೇ ತಪ್ಪು ಇಲ್ಲ. ಷಡ್ಯಂತ್ರ ಇದೆ. ಈ ಷಡ್ಯಂತ್ರದಿಂದ ನೀವು ಹೊರಗೆ ಬರುತ್ತೀರಾ ಎಂಬ ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ ಎಂದರು.

ನಾನು ಅವರಿಗೆ (ಸಂತೋಷ್) ನ್ಯಾಯಾಲಯದ ಮೂಲಕ ನೋಟೀಸ್ ಕೊಟ್ಟಾಗ ಹೆದರಿಕೊಂಡು ಈ ರೀತಿ ಮಾಡಿಕೊಂಡಿದ್ದಾರೆಂದುಕೊಂಡಿದ್ದೆ. ಆದರೆ ಆಮೇಲೆ ನನಗೆ ಒಂದೊಂದೇ ಅನುಮಾನ ಬರುತ್ತಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ಬರುತ್ತಿದೆ. ಕೊಲೆ ಎನ್ನುವ ಅಂಶಗಳ ಬಗ್ಗೆ ಬೇರೆ ಬೇರೆಯವರ ಜೊತೆ ಮಾತನಾಡಿದಾಗ ಅನೇಕ ಅಂಶ ಮಾತನಾಡಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ತನಿಖೆ ವರದಿ ಬರಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು

ಇದು ಆತ್ಮಹತ್ಯೆಯೋ, ಕೊಲೆಯೋ ಎಂದು ಗೊತ್ತಿಲ್ಲ. ತನಿಖೆಯ ವರದಿ ಬಂದ ನಂತರ ಸಿಎಂ ಜೊತೆ ಮಾತನಾಡುತ್ತೇನೆ. ತನಿಖೆ ನಡೆಯುವ ಸಂದರ್ಭದಲ್ಲಿ ಇದರ ಹಿಂದೆ ಡಿಕೆಶಿ ಇದ್ದಾರೋ, ಇಲ್ಲವೋ ಎಂಬ ಬಗ್ಗೆ ಈಗಲೇ ಹೇಳಲ್ಲ. ವರದಿಯ ಬಳಿಕ ಗೊತ್ತಾದರೆ ಆಗ ಹೇಳುತ್ತೇನೆ. ತನಿಖೆಯ ವರದಿ ತಿಳಿದುಕೊಳ್ಳದೇ ಏನು ಹೇಳಲು ಇಷ್ಟಪಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News