‘ಜನತಾ ಜಲಧಾರೆ' ಆರಂಭ: ದೇವೇಗೌಡ, ಎಚ್.ಡಿ.ಕುಮಾರಸ್ವಾಮಿಯವರಿಂದ ಜಲ ಸಂಗ್ರಹ

Update: 2022-04-16 14:52 GMT

ಬೆಂಗಳೂರು, ಎ. 16: ‘ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಕಲ್ಪ ಮಾಡಿ ಜಾತ್ಯತೀತ ಜನತಾದಳ ಹಮ್ಮಿಕೊಂಡಿರುವ ‘ಜನತಾ ಜಲಧಾರೆ ಗಂಗಾ ರಥಯಾತ್ರೆ'ಗೆ ವಿದ್ಯುಕ್ತವಾಗಿ ಶನಿವಾರ ಚಾಲನೆ ನೀಡಲಾಯಿತು.

ರಾಜ್ಯದ 15 ಜೀವನದಿಗಳ ಪುಣ್ಯಜಲವನ್ನು ಅಷ್ಟೂ ವಾಹನಗಳ ಕಲಶಗಳಿಗೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯಿತು. ವೇದಮಂತ್ರಗಳ ಪಠಣ, ಪೂಜೆ, ಮಂಗಳ ವಾದ್ಯಗಳ ಮೇಳ, ಕಲಾತಂಡಗಳ ಮೆರವಣಿಗೆ, ಪಕ್ಷದ ಕಾರ್ಯಕರ್ತೆಯರಿಂದ ಕಲಶಗಳ ಮೆರವಣಿಗೆ ಮೂಲಕ ಪುಣ್ಯಜಲವನ್ನು ಸಂಗ್ರಹ ಮಾಡಿ ಜಲಧಾರೆಯ ಗಂಗಾ ರಥಯಾತ್ರೆಗೆ ಮುನ್ನುಡಿ ಬರೆಯಲಾಯಿತು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ‘ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದಲ್ಲಿ ಕಾವೇರಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಜಲಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಬಿನಿಯಲ್ಲಿ ಗೌಡರಿಂದ ಪೂಜೆ: ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ದೇವೇಗೌಡ ಅವರು, ಕಬಿನಿ ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಪರಿಷತ್ ಸದಸ್ಯ ಮಂಜೇಗೌಡ, ಶಾಸಕ ಅಶ್ವಿನ್ ಕುಮಾರ ಗಂಗಾ ಪೂಜೆ ಸಲ್ಲಿಸಿದರು.ಇನ್ನು ಬಯಲು ಸೀಮೆ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡುವ ಎತ್ತಿನಹೊಳೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸಕಲೇಶಪುರದಲ್ಲಿ ಜಲ ಸಂಗ್ರಹ ಮಾಡಿದರು.

ವಿಧುರಾಶ್ವತ್ಥದಲ್ಲಿ ನಿಖಿಲ್ ಕುಮಾರಸ್ವಾಮಿ: ನೀರಿನ ಬವಣೆಗೆ ತೀವ್ರವಾಗಿ ತುತ್ತಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದಲ್ಲಿ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾಧ್ಯಕ್ಷ ಮುನೇಗೌಡ, ಶಾಸಕರಾದ ಕೆ.ಎಂ.ಕಷ್ಣಾರೆಡ್ಡಿ, ಗೋವಿಂದ ರಾಜು ಹಾಜರಿದ್ದರು ಎಂದು ಅವರು ಮಾಹಿತಿ ನೀಡಿದರು.

ಹದಿನೈದು ಕಡೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಹನುಮ ಜಯಂತಿಯ ದಿನವಾದ ಇಂದು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಈ ಕಾರ್ಯ ಆರಂಭ, ಮೇ 8ರವರೆಗೂ ನಡೆಯಲಿರುವ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 94 ಕಡೆ ಜಲ ಸಂಗ್ರಹ ಮಾಡಿ ಕೊಂಡು ಬೆಂಗಳೂರು ತಲುಪಲಾಗುತ್ತದೆ. ಉಳಿದ ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು ಜಲಸಂಗ್ರಹ ಮಾಡಲಿದ್ದಾರೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News