×
Ad

ಶೇ. 40 ಕಮಿಷನ್ ಆರೋಪದ ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

Update: 2022-04-16 20:11 IST

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾಗಿರುವ ಮಾಜಿ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು, ರಾಜ್ಯ ಸರಕಾರದ ಮಂತ್ರಿಗಳು, ಶಾಸಕರ ಮೇಲೆ ಇರುವ ಶೇ.40 ಕಮಿಶನ್ ಆರೋಪದ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರಿಂದ ನಡೆಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಹಾಗೂ ಹಾಗೂ ಬೆಲೆ ಏರಿಕೆ ನಿಯಂತ್ರಣಕ್ಕೆ ಒತ್ತಾಯಿಸಿ ಶನಿವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಅಧಿಕಾರದಲ್ಲಿರುವ ಬೊಮ್ಮಾಯಿ ಸರಕಾರ ಹಿಂದೆಂದೂ ಕಾಣದಂತಹ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದ ಬಿಜೆಪಿ ಸರಕಾರ ರಚನೆಯಾಗಿದ್ದೇ ಭ್ರಷ್ಟಾಚಾರದಿಂದ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 17 ಶಾಸಕರನ್ನು ಭ್ರಷ್ಟಾಚಾರದಿಂದ ಗಳಿಸಿದ ಹಣದಿಂದ ಖರೀದಿಸಿ ಸರಕಾರ ರಚಿಸಿದ್ದಾರೆ. ರಾಜ್ಯದಲ್ಲಿರುವುದು ಬಿಜೆಪಿ ಸರಕಾರವಲ್ಲ, ಅನೈತಿಕ ಸರಕಾರ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಬಹುಮತ ಪಡೆದು ಸರಕಾರ ರಚನೆ ಮಾಡಿಲ್ಲ, 2008ರಲ್ಲಿ ರೆಡ್ಡಿಗಳು ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಆಪರೇಷನ್ ಕಮಲದ ಮೂಲಕ ರಚಿಸಿದರು. 2018ರಲ್ಲಿ ಆಪರೇಷನ್ ಕಮಲ ಮಾಡಿ 20ರಿಂದ 25 ಕೋಟಿ ಹಣ ನೀಡಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸಿ ಸರಕಾರ ರಚಿಸಿದರು. ಭ್ರಷ್ಟಚಾರದ ಹಣವನ್ನು ಚೆಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಬಿಜೆಪಿ ರಾಜ್ಯದಲ್ಲಿ ಯಾವತ್ತೂ ಬಹುಮತದಿಂದ ಸರಕಾರ ನಡೆಸಿಲ್ಲ. ಭ್ರಷ್ಟಾಚಾರದ ಹಣ ಚೆಲ್ಲಿ ಆಪರೇಷನ್ ಕಮಲದ ಮೂಲಕ ಸರಕಾರ ರಚಿಸಿದೆ. ಈ ಸರಕಾರ ಅಧಿಕಾರಕ್ಕೆ ಬಂದಿರುವುದೇ ಜನರ ಹಣವನ್ನು ಲೂಟಿ ಹೊಡೆಯಲು ಎಂದು ಆರೋಪಿಸಿದರು.

"ಯಡಿಯೂರಪ್ಪ ಅವರ ಮಗ ವಿಜಯೇಂದ್ರ ತಮ್ಮ ಮನೆಯಲ್ಲೇ ಕುಳಿತು 10-20 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಯತ್ನಾಳ್ ಆರೋಪಿಸಿದ್ದಾರೆ. ಭದ್ರಾ ಮೇಲ್ದಂಡೆ ಕಾಮಗಾರಿಗೆ 2 ಸಾವಿರ ಕೋಟಿಗೆ ಟೆಂಡರ್ ಕರೆದು ಶೇ.10ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ. ಬಿಜೆಪಿಯವರ ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಮಿಸ್ಟರ್ ಬೊಮ್ಮಾಯಿ, ಮಿಸ್ಟರ್ ಯಡಿಯೂರಪ್ಪ" ಎಂದ ಸಿದ್ದರಾಮಯ್ಯ, ಸರಕಾರಿ ಕಾಮಗಾರಿಗಳಲ್ಲಿ ಶೇ.40 ಪರ್ಸೆಂಟ್ ಕಮಿಷನ್ ಕೇಳುತ್ತಾರೆಂದು ಆರೋಪಿಸಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ ನಾನು ಚೌಕಿದಾರ್, (ಕಾವಲುಗಾರ) ನಾನು ತಿನ್ನಲ್ಲ, ಯಾರಿಗೂ ತಿನ್ನಲು ಬಿಡಲ್ಲ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಅವರು ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಗುತ್ತಿಗೆದಾರರು ಲಿಖಿತ ದೂರು ನೀಡಿದರೂ ಏಕೆ ಕ್ರಮಕೈಗೊಂಡಿಲ್ಲ. ಭ್ರಷ್ಟಾಚಾರದಲ್ಲಿ ಪ್ರಧಾನಿ ಮೋದಿಗೆ ಸಿಗುತ್ತಿರುವ ಪಾಲೆಷ್ಟು ಎಂದು ಪ್ರಶ್ನಿಸಿದರು.

4 ಕೋಟಿ ರೂ. ಕಾಮಗಾರಿ ನಡೆಸಿದ ಸಂತೋಷ್ ಪಾಟೀಲ್ ಅವರು ಸಚಿವರಾಗಿದ್ದ ಈಶ್ವರಪ್ಪ ಅವರು ಕೇಳಿದ್ದ 40 ಪರ್ಸೆಂಟ್ ಕಷಶನ್ ನೀಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಾಟ್ಸಪ್ ಮೇಸೆಜ್‍ನಲ್ಲಿ ನನ್ನ ಸಾವಿಗೆ ಈಶ್ವರಪ್ಪ ಕಾರಣವೆಂದು ಬರೆದಿದ್ದಾರೆ. ಕುಟುಂಬದವರು ಈಶ್ವರಪ್ಪನೇ ಸಂತೋಷ್ ಸಾವಿಗೆ ಕಾರಣವೆಂದು ದೂರು ನೀಡಿದ್ದಾರೆ. ಆದರೆ ಬೊಮ್ಮಾಯಿ ಸರಕಾರ ಈಶ್ವರಪ್ಪ ಮೇಲೆ ಭ್ರಷ್ಟಚಾರದ ಕೇಸ್ ಹಾಕದೇ ಅವರನ್ನು ಬಂಧನದಿಂದಪಾರು ಮಾಡಲು ಪೊಲೀಸರ ಮೇಲೆ ಒತ್ತಡ ಹೇರಿ ಪೊಳ್ಳು ಕೇಸ್ ಹಾಕಿ ರಕ್ಷಣೆ ನೀಡುತ್ತಿದ್ದಾರೆ. ಈ ಮೂಲಕ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಹೊಸದೇನಲ್ಲ, ಅಧಿಕಾರಕ್ಕಾಗಿ ಹೋರಾಟ ಕೈಗೆತ್ತಿಕೊಂಡಿಲ್ಲ, ಆದರೆ ಸಂವಿಧಾನ ಉಳಿಸಲು, ಜನರು ಉತ್ತಮ ಜೀವನ ನಡೆಸಲು ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂಬ ಕಾರಣಕ್ಕೆ ಹೋರಾಟ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಂದಾಗ ರಾಜ್ಯಲ್ಲಿ ಶೇ.10 ಸರಕಾರ ಇದೆ ಎಂದು ನಮ್ಮ ಮೇಲೆ ಆಧಾರರಹಿತ ಆರೋಪ ಮಾಡಿದ್ದರು. ಈಗ ರಾಜ್ಯದಲ್ಲಿ ಶೇ.40 ಸರಕಾರ ಇದೆ ಎಂದು ಆಧಾರ ಸಹಿತ ದೂರು ನೀಡಲಾಗಿದೆ, ಬಿಜೆಪಿ ಸರಕಾರ ಜನರ ತೆರಿಗೆ ಹಣ ತಿಂದು ತೇಗುತ್ತಿದ್ದರೂ ಪ್ರಧಾನಿ ನೋಡಿಕೊಂಡು ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡು ಎಂದರು.

ಈಶ್ವರಪ್ಪ ವಿರುದ್ಧ ಭ್ರಷ್ಟಚಾರ ಪ್ರಕರಣ ದಾಖಲಿಸಿ ಬಂಧಿಸಬೇಕು. ಸಾಕ್ಷ್ಯಗಳ ನಾಶಪಡಿಸುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಸಂತೋಷ್ ಕುಟುಂಬಕ್ಕೆ ಗುತ್ತಿಗೆ ಕಾಮಗಾರಿ ಹಣ ನೀಡುವುದರೊಂದಿಗೆ ಆತನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. ಸಂತೋಷ ಪತ್ನಿಗೆ ಸರಕಾರಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಭಾಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಗುತ್ತಿಗೆದಾರರೊಬ್ಬರು ಹಿಡಿತ ಸಾಧಿಸಿದ್ದಾರೆ. ಅಧಿಕಾರಿಗಳು ಅವರ ಮನೆಬಾಗಿಲಿಗೆ ಹೋಗಿ ಕೇಳಿದ ಕೆಲಸ ಮಾಡಿಕೊಡಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದ್ದು, 40 ಪಾರ್ಸೆಂಟ್ ಕಮಿಷನ್ ತೊಲಗಿಸಲು ಸಿದ್ದರಾಮಯ್ಯ ಅವರು ಬದ್ಧರಾಗಬೇಕು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮಾತನಾಡಿ, ನಮ್ಮ ರಾಜ್ಯ ಪ್ರಗತಿಪರ ರಾಜ್ಯ. ಅನೇಕ ಮುಖ್ಯಮಂತ್ರಿಗಳು ರಾಜ್ಯಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ. ಆದರೆ, ಬಿಜೆಪಿ ಸರಕಾರ ಭ್ರಷ್ಟಾಚಾರದ ಮೂಲಕ ರಾಜ್ಯಕ್ಕೆ ಕಪ್ಪುಚುಕ್ಕೆ ತರುತ್ತಿದೆ. ಇಂತಹ ಸರಕಾರ ಅಧಿಕಾರದಲ್ಲಿದ್ದರೇ ರಾಜ್ಯದ ಸ್ಥಿತಿ ಅದೋಗತಿಗೆ ತಲುಪಲಿದೆ ಎಂದು ಟೀಕಿಸಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರ ಜಿ.ಎ. ಬಾವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಗಾಯತ್ರಿಶಾಂತೇಗೌಡ, ಎಂ.ಎಲ್.ಮೂರ್ತಿ, ಟಿ.ಡಿ.ರಾಜೇಗೌಡ, ಎ. ಎನ್.ಮಹೇಶ್, ರೇಖಾಹುಲಿಯಪ್ಪಗೌಡ, ಎಚ್.ಎಚ್.ದೇವರಾಜ್, ಮಮತ, ನಯನ, ಸಚಿನ್‍ಮೀಗಾ, ಜಿ.ಎಚ್.ಶ್ರೀನಿವಾಸ, ಟಿ.ಎಚ್.ಶಿವಶಂಕರಪ್ಪ, ಗೋಪಿಕೃಷ್ಣ, ಕೆಂಪರಾಜ್, ಎಚ್.ಎಂ.ಸತೀಶ್, ಡಾ.ಡಿ.ಎಲ್.ವಿಜಯಕುಮಾರ್, ಕೆ. ಮಹ್ಮದ್, ಆನಂದ್, ಬಿ.ಎಚ್. ಹರೀಶ್, ಶಿವಾನಂದಸ್ವಾಮಿ, ಹಿರೇಮಗಳೂರು ಪುಟ್ಟಸ್ವಾಮಿ, ಎಚ್.ಪಿ. ಮಂಜೇಗೌಡ, ಸಂತೋಷ್ ಇದ್ದರು.

ಐದು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸಲು ಕೆಪಿಸಿಸಿ 9 ತಂಡಗಳನ್ನು ರಚಿಸಿದೆ. ಜನರ ಬಳಿಗೆ ತೆರಳಿ ಬಿಜೆಪಿ ಸರಕಾರದ ಭ್ರಷ್ಟಚಾರದ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಮುಂದಿನ 1 ವರ್ಷಗಳ ಕಾಲ ಅವಿರತ ಶ್ರಮಿಸಬೇಕು.
- ಸಿದ್ದರಾಮಯ್ಯ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News