ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಮೂಲಕ ಚುನಾವಣೆ ಎದುರಿಸಲು ಸಿದ್ಧ: ಬಸವರಾಜ ಬೊಮ್ಮಾಯಿ

Update: 2022-04-16 15:21 GMT

ಬೆಂಗಳೂರು: ‘ನಾವು ನಮ್ಮ ಅಭಿವೃದ್ಧಿ ಕಾರ್ಯದ ರಿಪೋರ್ಟ್ ಕಾರ್ಡ್ ಮೂಲಕ 2023ರಲ್ಲಿ ವಿಧಾನಸಭೆ ಚುನಾವಣೆಗೆ ಹೋಗಲಿದ್ದೇವೆ. ಸಕಾರಾತ್ಮಕ ವಿಚಾರದಿಂದ ಬಿಜೆಪಿ ಮತ್ತೆ ಗೆಲುವು ಸಾಧಿಸಲಿದೆ. ಈ ಸಂಕಲ್ಪ ಮತ್ತು ವಿಜಯದ ಯಾತ್ರೆ ವಿಜಯನಗರದ ನೆಲದಿಂದ ಈ ಪುಣ್ಯಭೂಮಿಯಿಂದ ಆರಂಭವಾಗುತ್ತಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‍ಗೆ ದಿಕ್ಕು ತೋಚುತ್ತಿಲ್ಲ. ಹಿಜಾಬ್ ವಿಚಾರದಲ್ಲಿ ಗೊಂದಲ ಮಾಡಿದವರ ಕುರಿತು ಮಾತನಾಡುವ ಧೈರ್ಯ ಆ ಪಕ್ಷಕ್ಕೆ ಇಲ್ಲ. ಯುವಕನ ಆತ್ಮಹತ್ಯೆ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ನಿಮ್ಮ ಕಾಲದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋದಲ್ಲಿ ಸಚಿವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೂ ಸಚಿವರು ಕೂಡಲೇ ರಾಜೀನಾಮೆ ಕೊಡಲಿಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಂತಿದೆ. ಬಿಡಿಎ ಹಗರಣ, ಸ್ಟೀಲ್ ಬ್ರಿಡ್ಜ್ ಸೇರಿ ಕಾಂಗ್ರೆಸ್ ಹಗರಣಗಳು ಇನ್ನೂ ಜನರಿಗೆ ನೆನಪಿವೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ನೆಲಕಚ್ಚಲಿದೆ. ಕಾಂಗ್ರೆಸ್‍ನವರು ಬಹಳ ಶುದ್ಧಹಸ್ತದವರು. ಎಲ್ಲ ಪ್ರಕರಣಗಳಲ್ಲಿ ಸತ್ಯ ಹೊರಕ್ಕೆ ಬರಲಿದೆ. ಕಾಂಗ್ರೆಸ್ಸಿಗರ ಮುಖವಾಡ ಕಳಚಿ ಬೀಳಲಿದೆ. ಕಾಂಗ್ರೆಸ್ ಮುಖಂಡರ ಕವಾಟಿನಲ್ಲಿ ಭ್ರಷ್ಟಾಚಾರದ ಅಸ್ಥಿಪಂಜರಗಳಿವೆ' ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.

ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಆಡಳಿತ ನಡೆಸುತ್ತಿದ್ದು, ದೇಶದ ಬಗ್ಗೆ ವಿಶ್ವದಾದ್ಯಂತ ಗೌರವ ಹೆಚ್ಚಾಗಿದೆ. ದೇಶವು ಆರ್ಥಿಕ, ಸಾಮಾಜಿಕ ಕ್ರಾಂತಿ ಮಾಡುತ್ತಿದೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ 60 ಕೋಟಿ ಜನರನ್ನು ತಲುಪುತ್ತಿದೆ. ಆಯುಷ್ಮಾನ್ ಭಾರತವು ಆರೋಗ್ಯ ಕವಚವಾಗಿ ಹೊರಹೊಮ್ಮಿದೆ. ಯುವಕರಿಗೆ ಕೆಲಸ ನೀಡುವ ಹಲವಾರು ಯೋಜನೆಗಳು ಆಶಾದಾಯಕವಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

‘ಆರು ದಶಕಗಳಿಂದ ವಿದ್ಯುತ್ ವಂಚಿತ ಎಲ್ಲ ಗ್ರಾಮಗಳಿಗೆ ವಿದ್ಯುತ್ ನೀಡಲಾಗಿದೆ. ಅಸಾಧ್ಯವನ್ನು ಸಾಧ್ಯ ಮಾಡುವ ಹಾಗೂ ಪ್ರತಿಯೊಬ್ಬರ ಮನೆಗೂ ನಲ್ಲಿ ನೀರು ನೀಡಲು ಮೋದಿ ಸರಕಾರ ಮುಂದಾಗಿದೆ. ಕರ್ನಾಟಕದಲ್ಲಿ 25 ಲಕ್ಷ ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕ ನೀಡಿದ್ದು, ಶೇ.49ರಷ್ಟು ಮನೆಗಳಿಗೆ ನಲ್ಲಿ ನೀರು ಸಂಪರ್ಕವಿದ್ದು, ಈ ವಾರಾಂತ್ಯದಲ್ಲಿ ಇನ್ನೂ 25 ಲಕ್ಷ ಮನೆಗಳಿಗೆ ಈ ಯೋಜನೆ ತಲುಪಲಿದೆ ಎಂದು ವಿವರಿಸಿದರು.

ಬಿಜೆಪಿ ದೇಶದೆಲ್ಲೆಡೆ ಜನಮಾನಸದಲ್ಲಿ ಶಾಶ್ವತ ಸ್ಥಾನಮಾನ ಪಡೆದಿದೆ. ಹಿಂದೆ ಬಿಜೆಪಿ ಬಗ್ಗೆ ಅಪಪ್ರಚಾರ ನಡೆಯುತ್ತಿತ್ತು. ಹಿಂದೆ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ರಾಜಕೀಯ, ಸಮಾಜ ಒಡೆಯುವ ಪ್ರವೃತ್ತಿ, ದೇಶ ಶಿಥಿಲಗೊಳಿಸುವ ರಾಜಕೀಯವು ಜನರ ಅರಿವಿಗೆ ಬಂತು. ಸರ್ವರ ಏಳಿಗೆಗಾಗಿ ಜನರು ಇದೀಗ ಎಲ್ಲೆಡೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ನುಡಿದರು.

ವಿಜಯನಗರ ಸಾಮ್ರಾಜ್ಯವು ಪರಕೀಯರ ಆಕ್ರಮಣವನ್ನು ತಡೆದು ನಿಲ್ಲಿಸಿ ಹಿಂದೂಗಳ ರಕ್ಷಣೆ ಮಾಡಿದ ಭೂಮಿ. ಈ ಭೂಮಿಯು ಅತ್ಯಂತ ಗಟ್ಟಿ ಮತ್ತು ಸುರಕ್ಷಿತ ಪ್ರದೇಶ. ಈ ಭೂಮಿಯಲ್ಲಿ ಮಾಡಿದ ಸಂಕಲ್ಪವು ಗಟ್ಟಿಯಾಗಿ ನಿಲ್ಲಲಿದೆ. ಇಲ್ಲಿ ಕಾರ್ಯಕಾರಿಣಿ ನಡೆಯುತ್ತಿರುವುದು ಪುಣ್ಯಭಾಗ್ಯ ಎಂದರು. ಬಿಜೆಪಿ ವಿಚಾರಧಾರೆಗೆ ಸ್ಫೂರ್ತಿ ಕೊಟ್ಟ ಸ್ಥಳವಿದು. ಇಲ್ಲಿನ ನಿರ್ಣಯಗಳು ರಾಜ್ಯದ ಭವ್ಯ ಭವಿಷ್ಯ ಬರೆಯಲಿದೆ ಎಂದು ಅವರು ನುಡಿದರು.

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣಾ, ಮಾಜಿ ಸಿಎಂ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಂಸದ ಡಿ.ವಿ.ಸದಾನಂದ ಗೌಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಆನಂದ್ ಸಿಂಗ್, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಸಚಿವೆ ಶಶಿಕಲಾ ಜೊಲ್ಲೆ, ಮುಖಂಡ ಮಹೇಶ್ ಟೆಂಗಿನಕಾಯಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News