×
Ad

ಜೆಡಿಎಸ್‍ಗೆ ಬಹುಮತ ನೀಡಿದರೆ ರಾಜ್ಯದ ಚಿತ್ರಣ ಬದಲು: ಎಚ್.ಡಿ. ಕುಮಾರಸ್ವಾಮಿ

Update: 2022-04-16 21:34 IST
ಎಚ್.ಡಿ. ಕುಮಾರಸ್ವಾಮಿ (File Photo)

ಆಲಮಟ್ಟಿ: ‘ಪೂರ್ಣ ಪ್ರಮಾಣದ ಜೆಡಿಎಸ್‍ಗೆ ಬಹುಮತ ಕೊಟ್ಟು ಅಧಿಕಾರಕ್ಕೆ ತಂದರೆ ಮುಂದಿನ ಐದು ವರ್ಷಗಳಲ್ಲಿ 75 ವರ್ಷಗಳಿಂದ ರಾಜ್ಯಕ್ಕೆ ಆಗಿರುವ ನೀರಾವರಿ ಅನ್ಯಾಯ ಸರಿಪಡಿಸುತ್ತೇನೆ. ಇಲ್ಲವಾದರೆ ಪಕ್ಷವನ್ನು ಬರ್ಕಾಸ್ತು ಮಾಡಿ ಮನೆಗೆ ಹೋಗುತ್ತೇನೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಶನಿವಾರ ಇಲ್ಲಿನ ಆಲಮಟ್ಟಿಯಲ್ಲಿ ಜನಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಜೆಡಿಎಸ್ ಈಗಲೂ 30ರಿಂದ 40 ಸೀಟು ಗೆಲ್ಲುತ್ತದೆ, ಅನುಮಾನ ಬೇಡ. ಆದರೆ, ನನಗೆ ಬೇಕಿರುವುದು 120 ಸೀಟು. ಹನುಮ ಜಯಂತಿಯಂದು ನಾನು ಶಪಥ ಮಾಡುತ್ತಿದ್ದೇನೆ. ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿ, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಮಾಡಿ ತೋರಿಸುವೆ ಎಂದು ಹೇಳಿದರು.

ಅಭಿವೃದ್ಧಿ ವಿಚಾರ ಮುಖ್ಯ: ‘ಭ್ರಷ್ಟಾಚಾರದ ಬಗ್ಗೆ ಬೇಕಾದಷ್ಟು ಹೇಳಬಹುದು. ಅದರ ನಮಗೆ ಬೇಕಿರುವುದು ಜನರ ಒಳಿತು ಮಾತ್ರ. ಈಗ ಎಲ್ಲೆಡೆ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಆದರೆ, ನಾವು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದೇವೆ. ನೀರಾವರಿ, ನಿರುದ್ಯೋಗ, ಶಿಕ್ಷಣ, ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಅನೇಕ ಯೋಜನೆಗಳ ಬಗ್ಗೆ ಚಿಂತನೆ ಮಾಡಿದ್ದೇವೆಂದು ಅವರು ಹೇಳಿದರು.

ನೀರಾವರಿ ಯೋಜನೆಗಳ ಸಾಕಾರಕ್ಕೆ ಪಕ್ಷದಿಂದ ಸಂಕಲ್ಪ ಮಾಡಿದ್ದೇವೆ. 75 ವರ್ಷಗಳಿಂದ ನೆರೆಯ ರಾಜ್ಯಗಳಂತೆ ನೀರು ಸದ್ಬಳಕೆ ಆಗಿಲ್ಲ. ಆ ಕಾರಣಕ್ಕೆ ಮುಂದಿನ ಚುನಾವಣೆ ದೃಷ್ಟಿಯಿಂದ 15 ಕಡೆ ನೀರು ಸಂಗ್ರಹ ಮಾಡಲು ಹೊರಟಿದ್ದೇವೆ. ಆ ಮೂಲಕ ಜನರಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಒಂದು ಬಾರಿ ಜೆಡಿಎಸ್‍ಗೆ ಸಂಪೂರ್ಣ ಬಹುಮತ ನೀಡಿ, ಇಡೀ ರಾಜ್ಯದ ಚಿತ್ರಣವನ್ನೇ ಬದಲಾಯಿಸುತ್ತವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ರಾಜಕೀಯ ಮಾಡುವುದಕ್ಕಿಂತ ನಾಡಿನ ಜನರ ಬದುಕು ಕಟ್ಟಿಕೊಡುವ ಕೆಲಸ ಆಗಬೇಕಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಆ ಕೆಲಸ ಮಾಡಲಿದೆ. ಬಿಜೆಪಿ ಹೊಸಪೇಟೆಯಲ್ಲಿ ಕಾರ್ಯಕಾರಿಣಿ ಸಭೆಯನ್ನು ನಡೆಸುತ್ತಿದೆ. ಆ ಪಕ್ಷ ಅಧಿಕಾರಕ್ಕಾಗಿ ಹಾತೊರೆಯುವ ಪಕ್ಷ. ಅವರಿಗೆ ಬೇಕಿರುವುದು ಜನರ ಒಳಿತಲ್ಲ, ಚುನಾವಣೆ ಎಂದು ಹರಿಹಾಯ್ದರು.

ಜಲದಾರೆ ಕಾರ್ಯಕ್ರಮವನ್ನು ನಾನು ಮುಖ್ಯಮಂತ್ರಿ ಆಗಲು ಮಾಡುತ್ತಿಲ್ಲ. ನೀರು ಎಲ್ಲರಿಗೂ ಅಗತ್ಯವಾದ ಜೀವದ್ರವ. ಗ್ರಾಮೀಣ ಪ್ರದೇಶದ ಜನರ ಪರಿಹಾರ ವಿಚಾರವಾಗಿದೆ ನೀರಾವರಿ. ಈ ಭಾಗದಲ್ಲಿ ನೀರಾವರಿ ಸೌಲಭ್ಯ ಎಷ್ಟು ಆಗಬೇಕಿದೆಯೋ, ಅಷ್ಟೇ ಬಡತನ ಇದೆ. ನೀವು ಮುಗ್ದ ಜನರಿದ್ದೀರಾ, ನಾವು ಕರೆದಾಗ ಬಂದು ಕೇಳಿಸಿಕೊಂಡು ಹೋಗ್ತೀರಿ. ಆದರೆ, ನಾನು ಹೇಳುವ ಎಲ್ಲ ಮಾಹಿತಿ ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಗುಳೆ ನಿಂತಿಲ್ಲ: ‘ಇಂದಿಗೂ ವಿಜಯಪುರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬರಡು ಭೂಮಿ ಇದೆ. ಜನರೂ ಈಗಲೂ ಗುಳೆ ಹೋಗುತ್ತಿದ್ದಾರೆ. 19 ಕುಟುಂಬಗಳು ಗುಳೆ ಹೋಗುವಾಗ ಅಪಘಾತ ಸಂಭವಿಸಿತು. ಆಗ ಅಂದಿನ ಸರಕಾರ ಪರಿಹಾರ ನೀಡಲಿಲ್ಲ. 2018ರಲ್ಲಿ ನಾನು ಸಿಎಂ ಆದಾಗ ಆ ಊರಿಗೆ ತೆರಳಿ ಜನ ಗುಳೆ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದೆ ಎಂದು ಅವರು ಹೇಳಿದರು.

ಹನುಮ ಜಯಂತಿಯಂದು ಕಾರ್ಯಕ್ರಮ ಆರಂಭಿಸಿದ್ದೇವೆ. ತಾಯಂದಿರು, ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು. ಇದು ನಮ್ಮ ನಾಡಿಗೆ ಶ್ರೇಯಸ್ಸು ಅಲ್ಲ. ದೇವೇಗೌಡರನ್ನು ಪ್ರಧಾನಿ ಮಾಡಿದಾಗ, ಕೇಂದ್ರವೇ ಇಲ್ಲಿಗೆ ಬಂದಿತ್ತು. ಈಗ ನೋಡಿದರೆ ತಾಂಡಾದಲ್ಲಿ ಹೆಣ್ಣುಮಕ್ಕಳು ಪ್ರತಿಭಟನೆ ಕೂತಿದ್ದಾರೆ. ಗುತ್ತಿ ಬಸವಣ್ಣ ಕಾರ್ಯಕ್ರಮಕ್ಕೆ ನೀರಿಲ್ಲ ಎಂದು ಅವರು ಧರಣಿ ಕೂತಿದ್ದಾರೆ. ಇಂದು ಮೋದಿ ಚೆನ್ನಾಗಿ ಭಾಷಣ ಮಾಡುತ್ತಾರೆ. ಆದರೆ ಮಾತಿನಿಂದ ಏನೂ ಆಗುವುದಿಲ್ಲ. ಅಡುಗೆ ಅನಿಲ, ಅಡುಗೆ ಎಣ್ಣೆ, ಪೆಟ್ರೋಲ್ ಬೆಲೆ ಎಲ್ಲಿಗೆ ಹೋಗಿದೆ ಎಂದು ಅವರು ಟೀಕಿಸಿದರು.

‘ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಏನು ಮಾಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಧಿಕಾರಕ್ಕೆ ಅಂಟಿಕೊಂಡು ಜನರನ್ನು ಒಡೆದು ಅಳುತ್ತಿದೆ'
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News