ಹಳೇ ಹುಬ್ಬಳ್ಳಿ: ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪಿ ಅಭಿಷೇಕ್ ಹಿರೇಮಠ ಸೆರೆ
ಹುಬ್ಬಳ್ಳಿ: ಮಸೀದಿಯ ಚಿತ್ರದ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರ ಎಡಿಟ್ ಮಾಡಿ ಯುವಕನೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪೋಸ್ಟ್ ಮಾಡಿದ್ದ ಆರೋಪಿ ಅಭಿಷೇಕ್ ಹಿರೇಮಠ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ, ಜೈ ಶ್ರೀರಾಮ್, ಹಿಂದೂ ಸಾಮ್ರಾಟ್‘ ಎಂದು ಎಡಿಟ್ ಮಾಡಿದ ಚಿತ್ರದ ಮೇಲೆ ಬರೆಯಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಸಮೀಪದಲ್ಲಿಯೇ ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿದರು. ಘಟನೆಯಲ್ಲಿ ಪೊಲೀಸ್ ವಾಹನಗಳು ಜಖಂಗೊಂಡಿವೆ. ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಶಾಂತಿ ಕಾಪಾಡಲು ಕಮಿಷನರ್ ಮನವಿ
‘ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಕೆಲವರು ಜನರನ್ನು ಸೇರಿಸಿದ್ದು ಎಲ್ಲರೊಂದಿಗೂ ನಾವು ಚರ್ಚೆಗೆ ಮುಂದಾದೆವು. ಆದರೆ, ಜನರ ಗುಂಪು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ’ ಎಂದು ಕಮಿಷನರ್ ಲಾಭೂರಾಮ್ ಮಾಧ್ಯಮಗಳಿಗೆ ತಿಳಿಸಿದರು.
ಗಲಾಟೆಯ ಹಿಂದಿರುವ ವ್ಯಕ್ತಿಗಳ ಬಗ್ಗೆಯೂ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಶಾಂತಿ ಕಾಪಾಡಿಕೊಳ್ಳಲು ಒತ್ತು ಕೊಡಬೇಕು ಎಂದು ಮನವಿ ಮಾಡಿದರು.