ಧರ್ಮವು ಸಮಾಜದಲ್ಲಿ ಮನುಷ್ಯರನ್ನು ಒಗ್ಗೂಡಿಸಿ ಪರಸ್ಪರ ಬೆರೆತು ಬಾಳುವುದನ್ನು ಕಲಿಸುತ್ತದೆ: ರಿಯಾಝ್ ಅಹ್ಮದ್
ಹುಣಸೂರು: "ಧರ್ಮವು ಸಮಾಜದಲ್ಲಿ ಮನುಷ್ಯರನ್ನು ಒಗ್ಗೂಡಿಸಿ ಪರಸ್ಪರರೊಂದಿಗೆ ಬೆರೆತು ಬಾಳುವುದನ್ನು ಕಲಿಸುತ್ತದೆ, ಅದೇ ವೇಳೆ ಅಧರ್ಮವು ಜನರನ್ನು ಪರಸ್ಪರ ದ್ವೇಷಿಸುವಂತೆ ಮಾಡುತ್ತದೆ. ಸಮಾಜದಲ್ಲಿ ಜನರ ಮಧ್ಯೆ ಒಡಕನ್ನುಂಟು ಮಾಡಿ ಸಂಶಯ ಗೋಡೆಗಳನ್ನು ನಿರ್ಮಿಸುವವರೇ ಧರ್ಮ ದ್ರೋಹಿಗಳು" ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಜೊತೆ ಕಾರ್ಯದರ್ಶಿ ರಿಯಾಝ್ ಅಹ್ಮದ್ ಹೇಳಿದರು.
ಅವರು ಇಲ್ಲಿಯ ಸುಮನ್ ಫಂಕ್ಷನ್ ಹಾಲ್ ನಲ್ಲಿ ಹುಣಸೂರು ಪಬ್ಲಿಕ್ ಪೀಸ್ ಕಮಿಟಿ ಹಾಗೂ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಂತಹ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಫಾದರ್ ಜಾರ್ಜ್ ಮಾರ್ಟಿಸ್ "ಇಂತಹ ಸಭೆ-ಸಮಾರಂಭಗಳ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಇಂದು ಎಲ್ಲಾ ಧರ್ಮದ ನೈಜ ಸಂದೇಶಗಳನ್ನು ವ್ಯಾಪಕಗೊಳಿಸುವ ಅಗತ್ಯವಿದೆ" ಎಂದು ಹೇಳಿದರು.
ಅಡ್ವೊಕೇಟ್ ಪುಟ್ಟರಾಜು "ಅನ್ಯಾಯದ ವಿರುದ್ಧ ನಾವು ಮೌನವಾಗಿದೆ ಪ್ರತಿಭಟಿಸೋಣ. ಧರ್ಮದ ತಿಳುವಳಿಕೆ ಮೂಡಿಸುವಂತಹ ಇಂತಹ ಕಾರ್ಯಕ್ರಮಗಳು ರಾಜ್ಯದ ಮೂಲೆಮೂಲೆಗೂ ತಲುಪಲಿ ಎಂದು ಹಾರೈಸಿದರು.
ಅಝೀಝುಲ್ಲಾಹ್ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
ಎಚ್.ಪಿ.ಪಿ.ಸಿ. ಹುಣಸೂರು ಅಧ್ಯಕ್ಷರಾದ ಸಯ್ಯದ್ ಅಹ್ಮದ್ ಶಾಹ್, ಕಾರ್ಯದರ್ಶಿ ಮುಝಮ್ಮಿಲ್ ಖಾನ್, ಎಸ್.ವೈ.ಎಂ. ಅಧ್ಯಕ್ಷರಾದ ಮುದಸ್ಸಿರ್ ಖಾನ್, ರೈತ ಸಂಘದ ಹೊಸ್ಸೂರು ಕುಮಾರ್, ಡಿ.ಎಸ್.ಎಸ್. ಮುಖಂಡರಾದ ರಾಮಕೃಷ್ಣ ಅತ್ತಿಗುಪ್ಪೆ, ಜ.ಇ.ಹಿಂದ್ ಚಾಮರಾಜನಗರ ಜಿಲ್ಲಾ ಸಂಚಾಲಕರಾದ ಝೈನುಲ್ ಆಬಿದೀನ್, ಅಡ್ವೊಕೇಟ್ ಮಲ್ಲೇಶ್, ಹ್ಯೂಮನ್ ಹೆಲ್ಪ್ ಫೌಂಡೇಶನ್ ಅಧ್ಯಕ್ಷ ಇನಾಯತ್, ಎಚ್.ಎಚ್.ಎಫ್. ಕಾರ್ಯದರ್ಶಿ ಸೈಯದ್ ರಿಝ್ವಾನ್, ರಾಶಿದ್, ಪುಟ್ಟಸ್ವಾಮಿ ರತ್ನಾಪುರಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.