ಬಿಜೆಪಿಯಲ್ಲಿ ಲಂಚ- ಮಂಚಕ್ಕೆ 2 ವಿಕೆಟ್ ಬಿದ್ದಿದೆ, ಇನ್ನೂ 5 ವಿಕೆಟ್ ಗಳು ಬೀಳಲಿದೆ:ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್

Update: 2022-04-17 16:00 GMT
ಎಂ.ಲಕ್ಷ್ಮಣ್

ಮೈಸೂರು: 'ಬಿಜೆಪಿಯಲ್ಲಿ ಲಂಚ ಮಂಚಕ್ಕೆ ಎರಡು ವಿಕೆಟ್ ಬಿದ್ದಿದೆ. ಇನ್ನೂ ಐದು ವಿಕೆಟ್ ಗಳು ಲಂಚಕ್ಕಾಗಿ ಬೀಳಲಿದೆ' ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ಈಶ್ವರಪ್ಪ ಅವರ ಪುತ್ರ ಕಾಂತರಾಜು ಕಳೆದ ನಾಲ್ಕೈದು ವರ್ಷಗಳಲ್ಲಿ 29 ಸೈಟುಗಳನ್ನು ಖರೀದಿ ಮಾಡಿದ್ದಾರೆ. ಕೈಗಾರಿಕಾ ವಲಯದಲ್ಲಿ 9 ಸೈಟ್ ತೆಗೆದುಕೊಂಡಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಈಶ್ವರಪ್ಪ ನಂ.1 ಆರೋಪಿ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಪ್ರೆಸ್ ಮೀಟ್ ನಲ್ಲಿ ಆರೋಪಿಯನ್ನು ಪಕ್ಕದಲ್ಲೆ ಕೂರಿಸಿಕೊಂಡು ರಾಜೀನಾಮೆ ಪತ್ರವನ್ನು ತೋರ್ಪಡಿಸಿದ್ದರು. ಆರೋಪಿಯನ್ನು ಪಕ್ಕದಲ್ಲೇ ಇಟ್ಟುಕೊಂಡು ಸಾಮಾನ್ಯ ಜನರಿಗೆ ಹೇಗೆ ನ್ಯಾಯ ಒದಗಿಸಲು ಸಾಧ್ಯ' ಎಂದು ಪ್ರಶ್ನಿಸಿದರು.

'ಈಶ್ವರಪ್ಪ ದಾರಿಯುದ್ದಕ್ಕೂ ಮೆರವಣಿಗೆ ಮಾಡುತ್ತಾ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗುತ್ತೇನೆ ಎನ್ನುತ್ತಾರೆ. ಇತ್ತ ಆರೋಪಿ ಪರ ಸಿಎಂ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸಹ ಆರೋಪ ಮುಕ್ತರಾಗಿ ಸಂಪುಟ ಸೇರುತ್ತಾರೆ ಎಂದು ಹೇಳುತ್ತಾರೆ. ಒತ್ತಡವನ್ನು ಕಡಿಮೆಗೊಳಿಸಲು ರಾಜೀನಾಮೆ ಕೊಡಿಸಿದ್ದಾರೆ ಅಷ್ಟೇ. ಈಶ್ವರಪ್ಪರನ್ನು ಬಂಧಿಸದಿದ್ದರೆ ಸಾಕ್ಷ್ಯ   ನಾಶ ಮಾಡುತ್ತಾರೆ. ರಾಜೀನಾಮೆ ನೀಡುವ ಮುನ್ನವು 159 ಮಂದಿಯನ್ನು ವರ್ಗಾವಣೆ ಮಾಡುತ್ತಾರೆ. ಈಪೈಕಿ29 ಮಂದಿ  ಮೈಸೂರಿನವರನ್ನು ವರ್ಗಾವಣೆ ಮಾಡಿದ್ದಾರೆ. ಈ ವಿಚಾರಗಳೆ ಭ್ರಷ್ಟರು ಎಂದು ತೋರಿಸುತ್ತಿದೆ' ಎಂದು ಹರಿಹಾಯ್ದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಜ್ಯದಲ್ಲಿ ಶೇ.40 ಕಮಿಷನ್ ಮಾಡಿದ್ದು, ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯಲ್ಲಿ ಸುಮಾರ 2 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಗುತ್ತಿಗೆ ನೀಡಲು ಎಇಇ ಒಪ್ಪಿಗೆ ಪತ್ರ ಪಡೆಯಬೇಕೆಂಬ ಹೊಸ ನಿಯಮ ಜಾರಿಗೆ ತಂದು, ಭಾರೀ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಲೂಟಿ ರವಿಯಾಗಿದ್ದಾರೆ. ಅವರ ಬಳಿ 19.3 ಎಕರೆ ಜಮೀನು ಇತ್ತು. ಇವತ್ತು ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿ ಹಲವೆಡೆ 400ರಿಂದ 500 ಎಕರೆ ಜಮೀನನ್ನು ಬಾವ ಸುದರ್ಶನ್ ಹೆಸರಿನಲ್ಲಿ ಮಾಡಿದ್ದಾರೆ. ನ್ಯಾಷನಲ್ ಹೈವೇ ರಸ್ತೆಯಲ್ಲಿ ಬರುವ ತುಂಡು ಗುತ್ತಿಗೆಯನ್ನು ಬಾವಾಜಿಗೆ ಕೊಡಿಸಿದ್ದೀರಾ? ಆದರೆ ತಾವು ಮಾತ್ರ ಸತ್ಯಹರಿಶ್ಚಂದ್ರರ ರೀತಿಯಲ್ಲಿ ಮಾತಾಡುತ್ತಾರೆ ಎಂದು ಕುಟುಕಿದರು.

ಕಾಂಗ್ರೆಸ್ ನಾಯಕರು ಮಾತ್ರ ಜೈಲಿಗೆ ಹೋಗಿ ಬಂದವರ ರೀತಿಯಲ್ಲಿ ಮಾತಾಡುವ ಸಿ.ಟಿ.ರವಿ ಅವರು 110 ದಿನಗಳ ಕಾಲ ಅಮಿತ್ ಶಾ ಎಲ್ಲಿದ್ದರು? ಯಡಿಯೂರಪ್ಪ ಜೈಲಿಗೆ ಯಾಕೇ ಹೋಗಿದ್ದರು? ಡಿ.ವಿ.ಸದಾನಂದಗೌಡ ಸೇರಿ 12 ಬಿಜೆಪಿ ನಾಯಕರು ಅಶ್ಲೀಲ ವಿಡಿಯೋ ಪ್ರಸಾರಕ್ಕೆ ತಡೆ ತಂದಿರುವುದು ಯಾಕೇ? ಮೈಸೂರಿನಲ್ಲಿ ಸಂಸದ-ಶಾಸಕರ ನಡುವಿನ ಗಲಾಟೆ ಏನಾಯಿತು? ಇವುಗಳ ಬಗ್ಗೆಯೂ ಮಾತಾಡಿ ಸಿ.ಟಿ.ರವಿ ಅವರೇ ಎಂದು ಒತ್ತಾಯಿಸಿದರು.

ದೇಶ ಬಿಜೆಪಿಯವರ ಸ್ವತ್ತಲ್ಲ. ಮುಸ್ಲಿಂರನ್ನು ಎತ್ತಿ ಕಟ್ಟಿ ಹಿಂದೂಗಳ ಮತಗಳ ಧ್ರುವೀಕರಣ ಮಾಡುವ ನಿಮ್ಮ ಲೆಕ್ಕಚಾರ ನಡೆಯದು. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಈಶ್ವರಪ್ಪ ಪ್ರಕರಣವನ್ನು ವಿಷಯಾಂತರ ಮಾಡಲು ಗಲಾಟೆ ಹಬ್ಬಿಸುತ್ತಿದ್ದಾರೆ ಎಂದರು.

ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಪ್ರಧಾನ ಕಾರ್ಯದರ್ಶಿ ಈಶ್ವರ ಚಕ್ಕಡಿ, ಸೇವಾದಳದ ಸಂಚಾಲಕ ಗಿರೀಶ್ ನಾಯಕ, ವಕ್ತಾರ ಕೆ.ಮಹೇಶ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News