ಮುಸ್ಲಿಮ್ ವ್ಯಾಪಾರಿಯ ಕಲ್ಲಂಗಡಿ ಧ್ವಂಸ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಯಾದವರಿಗೆ ಶ್ರೀರಾಮ ಸೇನೆಯಿಂದ ಭರ್ಜರಿ ಸ್ವಾಗತ

Update: 2022-04-17 15:11 GMT
photo courtesy:twitter/@KeypadGuerilla

ಧಾರವಾಡ,ಎ.17: ಇಲ್ಲಿಗೆ ಸಮೀಪದ ನುಗ್ಗಿಕೇರಿಯ ಹನುಮಂತ ದೇವಸ್ಥಾನದ ಹೊರಗೆ ವೃದ್ಧ ಮುಸ್ಲಿಮ್ ವ್ಯಾಪಾರಿಯ ಕಲ್ಲಂಗಡಿ ಹಣ್ಣುಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರು ಶನಿವಾರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. 

ಶ್ರೀರಾಮ ಸೇನೆಯು ಅವರನ್ನು ಸ್ವಾಗತಿಸಿದ್ದು ಮಾತ್ರವಲ್ಲ,ಅವರಿಗೆ ಮಾಲಾರ್ಪಣೆಯನ್ನೂ ಮಾಡಿ ಅವರ ಬಿಡುಗಡೆಯನ್ನು ಸಂಭ್ರಮಿಸಿದೆ. ವೃದ್ಧ ಮುಸ್ಲಿಮ್ ಹಣ್ಣು ವ್ಯಾಪಾರಿಯನ್ನು ಗುರಿಯಾಗಿಸಿದ್ದಕ್ಕೆ ಪ್ರಶಂಸೆಯಾಗಿ ಈ ಸಂಭ್ರಮದಲ್ಲಿ ಕಲ್ಲಂಗಡಿ ಹಣ್ಣೊಂದನ್ನೂ ಒಡೆಯಲಾಗಿತ್ತು.

ಎ.9ರಂದು ಶ್ರೀರಾಮ ಸೇನೆಯ ಕಾರ್ಯಕರ್ತರಾದ ಚಿದಾನಂದ ಕಲಾಲ,ಕುಮಾರ ಕಟ್ಟೀಮನಿ, ಮೈಲಾರಪ್ಪ ಗುಂಡಪ್ಪನವರ ಮತ್ತು ಮಹಾಲಿಂಗ ಐಗಳಿ ಅವರು ನಬಿಸಾಬ್ ಕಿಲ್ಲೆದಾರ್ ಮಾರಾಟ ಮಾಡುತ್ತಿದ್ದ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗೆಸೆದು ನಾಶಗೊಳಿಸಿದ್ದರು. ಕಿಲ್ಲೆದಾರ ಕಳೆದ 20 ವರ್ಷಗಳಿಂದಲೂ ಇದೇ ಜಾಗದಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿದ್ದಾರೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಎ.22ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಆದರೆ ಎ.16ರಂದು ಈ ಆರೋಪಿಗಳು ಜಾಮೀನಿನಲ್ಲಿ ಹೊರಗೆ ಬಂದಿದ್ದಾರೆ.
 
ಶನಿವಾರ ಸಂಜೆ ಕೇಸರಿ ಶಾಲು ಧರಿಸಿದ್ದ ಆರೋಪಿಗಳನ್ನು ಶ್ರೀರಾಮ ಸೇನೆಯು ಭರ್ಜರಿಯಾಗಿ ಸ್ವಾಗತಿಸಿದೆ. ಸೇನೆಯ ಕಾರ್ಯಕರ್ತನೋರ್ವ ಆರೋಪಿಗಳ ಎದುರು ಕಲ್ಲಂಗಡಿ ಹಣ್ಣಿನ ಮೇಲೆ ಸಣ್ಣ ದೀಪವೊಂದನ್ನು ಹಚ್ಚಿ ಬಳಿಕ ಅದನ್ನು ನೆಲಕ್ಕೆ ಅಪ್ಪಳಿಸಿದ್ದನ್ನು ವೀಡಿಯೊ ತೋರಿಸಿದೆ.

ಆರೋಪಿಗಳ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಶ್ರೀರಾಮ ಸೇನೆಯು,ಹಿಂದು ದೇವಸ್ಥಾನಗಳ ಬಳಿ ವ್ಯಾಪಾರ ಮಾಡದಂತೆ ಮುಸ್ಲಿಮರಿಗೆ ಒಂದು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಲಾಗಿತ್ತು. ಆದರೆ ಮುಸ್ಲಿಮರು ಅಲ್ಲಿಯೇ ವ್ಯಾಪಾರ ಮುಂದುವರಿಸಿದ್ದರಿಂದ ಈ ಕೃತ್ಯವನ್ನು ನಡೆಸಲಾಗಿದೆ ಎಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News