×
Ad

VIDEO-ಬಡವರ ಬಗ್ಗೆ ಕಳಕಳಿ ಇಲ್ಲದ ಮೋದಿಗೆ ಎಷ್ಟು ಇಂಚು ಎದೆ ಇದ್ರೂ ಏನ್ ಪ್ರಯೋಜನ: ಸಿದ್ದರಾಮಯ್ಯ ಪ್ರಶ್ನೆ

Update: 2022-04-17 20:05 IST

ಹಾಸನ : 'ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರ ಎಂಬುದು ತಾಂಡವವಾಡುತ್ತಿದ್ದು, ದುರಾಡಳಿ ಮುಚ್ಚಿಕೊಳ್ಳಲು ಕೋಮುವಾದವನ್ನು ಸೃಷ್ಠಿ ಮಾಡುತ್ತಿದ್ದಾರೆ. ಕೈಮುಗಿದು ಪ್ರಾರ್ಥಿಸುತ್ತೇನೆ ಮೊದಲು ಬಿಜೆಪಿ ಪಕ್ಷವನ್ನು ಕಿತ್ತೊಗೆಯರಿ' ಎಂದು ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ಕೊಟ್ಟರು.

ಹಾಸನದಲ್ಲಿ ​ ಭ್ರಷ್ಟಾಚಾರ ವಿರೋಧಿ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 'ಮೋದಿಯಷ್ಟು ಸುಳ್ಳು ಹೇಳೋ ಪ್ರಧಾನಮಂತ್ರಿ ಮತ್ತೊಬ್ಬರಿಲ್ಲ. ಇಡೀ ದೇಶದ ಇತಿಹಾಸದಲ್ಲಿ ಮೋದಿಯಂತಹ ದುರಾಡಳಿತ ಕಂಡಿಲ್ಲ' ಎಂದು ವ್ಯಂಗ್ಯವಾಡಿದರು. 

'ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದರು. ಆದರೇ ಇಂದು ಅಗತ್ಯ ವಸ್ತುಗಳ ಬೆಲೆ ಎಲ್ಲಾ ಗಗನಕ್ಕೇರಿದೆ. ಮಾತೆತ್ತಿದ್ರೆ ನನಗೆ 56 ಇಂಚಿನ ಎದೆ ಇದೆ ಅಂತಾರೆ. 56 ಇಲ್ಲದಿದ್ರೆ 58, 60 ಇಂಚಿನ ಎದೆ ಇಟ್ಟುಕೊಳ್ಳಲಿ ಬೇಡ ಅಂದೋರು ಯಾರು! ಬಾಡಿ ಬಿಲ್ಡರ್ ಗಳ ಎದೆ ಇನ್ನೂ ಜಾಸ್ತಿ ಇರುತ್ತೇ' ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಏನು ಮಾಡಿಲ್ಲ ಎಂದು ಹೇಳುತ್ತಿರುವ ಮೋದಿ ಅವರು ಈಗ ಮಾಡುತ್ತಿರೋದೇನು? ದೇಶದಲ್ಲಿ ಎಲ್ಲವನ್ನೂ ಮಾರಲು ಹೊರಟಿದ್ದಾರೆ. ದುರಾಡಳಿತವನ್ನು ಮುಚ್ಚಿಹಾಕಲು ಕೋಮುವಾದವನ್ನ ಸೃಷ್ಟಿಮಾಡಿದ್ದಾರೆ, ಜಾತ್ರೆಯಲ್ಲಿ ವ್ಯಾಪಾರ, ಹಲಾಲ್, ನೆನ್ನೆ ಮೊನ್ನೆಯದಾ.? ಇನ್ನು ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದ್ದು, ಕೈಮುಗಿದು ಪ್ರಾರ್ಥಿಸುತ್ತೇನೆ ಮೊದಲು ಬಿಜೆಪಿ ಪಕ್ಷವನು ಕಿತ್ತು ಹಾಕಿ  ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

​ಜೆಡಿಎಸ್ ನವರು ಬಿಜೆಪಿ ಬಿ ಟೀಂ, ಇಪ್ಪತ್ತೋ, ಮುವತ್ತೋ ಸೀಟು ಬಂದ್ರೆ ಸಾಕು ಎಂದು ಅವರು ಕೂತಿದ್ದಾರೆ. ಇವಾಗ ಕುಮಾರಸ್ವಾಮಿ 123 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ, ಇದು ಸಾಧ್ಯವಾ ಎಂದು ಟೀಕಿಸಿದರು. ಸಮ್ಮಿಶ್ರ ಸರ್ಕಾರದ ಸಿದ್ದರಾಮಯ್ಯ ರಿಂದ ಹೋಯ್ತು ಅಂತಾರೆ. 80 ಸೀಟು ಗೆದ್ದ ನಾವು 37 ಸೀಟು ಗೆದ್ದವರಿಗೆ ಅಧಿಕಾರ ನೀಡಿದ್ದೆವು. ಮುಖ್ಯಮಂತ್ರಿ ಆದ ಮೇಲೆ ತಾಜ್ ವೆಸ್ಟೆಂಡ್ ಹೋಟೆಲ್ ಸೇರಿಕೊಂಡ್ರು. ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ ಶೂರರೂ ಅಲ್ಲ ಎಂದು ಕಿಡಿಕಾರಿದರು. ಈಶ್ವರಪ್ಪನವರ ಮನೆಯಲ್ಲೇ ವಿಜಯೇಂದ್ರ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳುತ್ತಿದ್ದಾರೆ.

ಹೆಚ್.ವಿಶ್ವನಾಥ್ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ 2 ಸಾವಿರ ಕೋಟಿಗೆ 10 ಪರ್ಸೆಂಟೇಜ್ ಲಂಚ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಇವರುಗಳ ಮೇಲೆ ಯಾಕೆ ಕ್ರಮ ಆಗಿಲ್ಲ. ಹಾಗಿದ್ರೆ ಅವರ ಆರೋಪ ಸತ್ಯ ಎಂದಾಯಿತಲ್ಲಾ. ಇಂತಹ ಭ್ರಷ್ಟ ಸರ್ಕಾರ ನಮಗೆ ಬೇಕಾ ಎಂದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಂತರ ನಗರದ ಮಹಾವೀರ ವೃತ್ತದಿಂದ ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯು ತಹಸೀಲ್ದಾರ್ ನಟೇಶ್ ಅವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ದೃವನಾರಾಯಣ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಹೆಚ್.ಕೆ. ಮಹೇಶ್, ಹೆಚ್.ಕೆ. ಜವರೇಗೌಡ, ವಿಧಾನಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ, ಪುಟ್ಟೇಗೌಡ, ಮುಖಂಡರಾದ ಬನವಾಸೆ ರಂಗಸ್ವಾಮಿ, ಬಾಗೂರು ಮಂಜೇಗೌಡ, ದೇವರಾಜೇಗೌಡ, ರಾಮಚಂದ್ರ, ಅಬ್ದುಲ್ ಸಮದ್,  ರಂಜಿತ್ ಗೊರೂರು ಇತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News