×
Ad

ಪಿಎಸ್ಸೈ ನೇಮಕಾತಿ ಅಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಪ್ರಿಯಾಂಕ್ ಖರ್ಗೆ ಒತ್ತಾಯ

Update: 2022-04-17 20:47 IST
photo-twitter (ಪ್ರಿಯಾಂಕ್ ಖರ್ಗೆ)

ಬೆಂಗಳೂರು, ಎ. 17: ‘ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಪಿಎಸ್ಸೈ) ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಐದು ನೂರು ಕೋಟಿ ರೂ.ಮೊತ್ತದ ಹಗರಣ. ಇಷ್ಟು ದೊಡ್ಡ ಹಗರಣದ ತನಿಖೆಯನ್ನು ಸಮಗ್ರವಾಗಿ ನಡೆಸಬೇಕು. ಪಾರದರ್ಶಕ ತನಿಖೆ ನಡೆಸುವ ದೃಷ್ಟಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ  ಆಗ್ರಹಿಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಕೆಲ ಅಭ್ಯರ್ಥಿಗಳಿಂದ 60-70 ಲಕ್ಷ ರೂ.ಹಣ ಪಡೆದು ಅಕ್ರಮ ಎಸಗಲಾಗಿದೆ. ಅಲ್ಲದೆ, ಕಲಬುರಗಿಯಲ್ಲಿ ಪರೀಕ್ಷೆಯ ಅಕ್ರಮ ನಡೆದಿದ್ದು ಜ್ಞಾನಜ್ಯೋತಿ ಎಂಬ ಶಾಲೆಯ ಬಿಜೆಪಿ ಮುಖಂಡರಿಗೆ ಸೇರಿದ್ದು, ಪಿಎಸ್ಸೈ ಹುದ್ದೆಗಳ ಭರ್ತಿಗೆ 545 ಮತ್ತು 400 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ' ಎಂದರು.

‘ಮೊದಲ ಹಂತದ 545 ಹುದ್ದೆಗಳಿಗೆ 1.28ಲಕ್ಷ ಅರ್ಜಿಗಳು ಬಂದಿದ್ದು, 2021ರ ಅ.3ರಂದು ಲಿಖಿತ ಪರೀಕ್ಷೆ ನಡೆಯುತ್ತದೆ. ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದಾಗ ಅಭ್ಯರ್ಥಿಗಳಿಗೆ ಇದರಲ್ಲಿ ಅಕ್ರಮದ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಗೃಹ ಸಚಿವರು ಅಕ್ರಮ ನಡೆದಿಲ್ಲ ಎಂದು ಅಧಿವೇಶನದಲ್ಲಿ ಆರು ಬಾರಿ ಸುಳ್ಳು ಹೇಳಿದ್ದಾರೆ. ಒಬ್ಬ ಸಚಿವರಾಗಿ ಅವರ ಇಲಾಖೆಯ ಬಗ್ಗೆಯೇ ಮಾಹಿತಿ ಇರುವುದಿಲ್ಲವೇ?' ಎಂದು ಪ್ರಶ್ನಿಸಿದರು.

‘ಸಚಿವ ಪ್ರಭು ಚೌಹಾಣ್ ಅವರ ತಾಲೂಕಿನ 43 ಮಂದಿ ಆಯ್ಕೆ ಆಗಿದ್ದಾರೆ ಎಂದು ಮುಖ್ಯಮಂತ್ರಿಗೆ ದೂರು ನೀಡಲಾಗಿತ್ತು. ಸಚಿವರೇ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಇತ್ತ, ಅಭ್ಯರ್ಥಿಗಳು, ಬ್ಲ್ಯೂಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡುತ್ತಾರೆ. ಆದರೂ, ಆ ದೂರನ್ನು ಕಡೆಗಣಿಸಿದ್ದಾರೆ. ದೂರು ಕೊಟ್ಟವರು ಅಸೂಯೆಯಿಂದ ದೂರು ನೀಡಿದ್ದಾರೆ ಎಂದು ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ' ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

‘ಇದೀಗ ಗೃಹ ಸಚಿವ ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ತನಿಖೆಯಿಂದ ಏನೂ ಆಗುವುದಿಲ್ಲ. ಆದರೆ, ರಾಜ್ಯ ಸರಕಾರವೇ ಈ ಹಗರಣದಲ್ಲಿ ಭಾಗಿಯಾಗಿದೆ. ಇಲ್ಲವಾಗಿದ್ದರೆ ಇಂತಹ ಹಗರಣ ನಡೆಯಲು ಸಾಧ್ಯವಿಲ್ಲ. ಕಲಬುರಗಿಯಲ್ಲಿ ಅಕ್ರಮಕ್ಕೆ ಸಾಥ್ ನೀಡಿದವರ ಮನೆಗೆ ಗೃಹ ಸಚಿವರು ಭೇಟಿ ನೀಡಿ ಆರತಿ ಎತ್ತಿಸಿಕೊಂಡಿದ್ದರು. ಅಕ್ರಮಗಳು ನಡೆಯುತ್ತಿರುವಾಗ ಗೃಹ ಸಚಿವರು ಏಕೆ ಭೇಟಿ ಕೊಟ್ಟಿದ್ದರು?. ಈಗ ಅವರೆಲ್ಲ ಪರಾರಿಯಾಗಿದ್ದಾರೆಂದು ಗೃಹ ಸಚಿವರಿಗೆ ಗೊತ್ತಿಲ್ವಾ?' ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

‘ಗೃಹ ಸಚಿವರು ನಮಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸರ್ಟಿಫಿಕೇಟ್ ಬೇಡ ಎನ್ನುತ್ತಾರೆ. ಪರ್ವಾಗಿಲ್ಲ, ಆದರೆ ನಿಮ್ಮ ನಾಯಕ ಪ್ರಭು ಚೌಹಾಣ್ ಸೇರಿದಂತೆ ಅನೇಕರು ನಿಮಗೆ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಹರ್ಷ ಹತ್ಯೆ ಪ್ರಕರಣ ಎನ್‍ಐಎ, ಚಂದ್ರು ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ನಿಮಗೆ ಮಾಡಲು ತಾಕತ್ತು ಇಲ್ಲವೆ, ನಿಮ್ಮ ಮೇಲೆ ವಿಶ್ವಾಸವಿಲ್ಲವೇ? ಪಿಎಸ್ಸೈ ಪರೀಕ್ಷೆ ಬರೆದ ಅಭ್ಯರ್ಥಿಗಳು ಸರ್ಟಿಫಿಕೇಟ್ ನೀಡಿದ್ದಾರೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಬಹುದಿನಗಳ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದಾರೆ. ಈಶ್ವರಪ್ಪ ರಾಜೀನಾಮೆ ನೀಡುವಾಗ ಬಾಯಿ ಬಿಚ್ಚಲಿಲ್ಲ. ಕಟೀಲ್ ಏಕೆ ಅಷ್ಟು ಹೆದರುತ್ತಾರೆ? ಅವರು ಪಕ್ಷದ ಅಧ್ಯಕ್ಷರು. ಅವರ ಹಿಂದೆ ಮೋದಿ ಇದ್ದಾರೆ. ಈಶ್ವರಪ್ಪರನ್ನು ಕಂಡರೆ ಭಯ ಏಕೆ? ಬಿಟ್ ಕಾಯಿನ್, ಪಿಎಸ್ಸೈ ಅಭ್ಯರ್ಥಿಗಳ ನೇಮಕದಲ್ಲಿನ ಭ್ರಷ್ಟಾಚಾರ ಬಗ್ಗೆ ಮಾತನಾಡಬೇಕು. ಪಿಎಸ್ಸೈ ಅಭ್ಯರ್ಥಿಗಳ ನೇಮಕದಲ್ಲಿ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News