ಜೋಡಿ ಕೊಲೆ ಪ್ರಕರಣ: ಬಾಲಾಪರಾಧಿಗೆ ಹೈಕೋರ್ಟ್‍ನಿಂದ ಜಾಮೀನು ಮಂಜೂರು

Update: 2022-04-17 17:43 GMT

ಬೆಂಗಳೂರು, ಎ.17: ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ 17 ವರ್ಷದ ಬಾಲಾಪರಾಧಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. 

ಪ್ರಕರಣದಲ್ಲಿ ಎರಡೂವರೆ ವರ್ಷಗಳಿಂದ ಜೈಲಿನಲ್ಲಿದ್ದ ಬಾಲಕ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಪೀಠ ತನ್ನ ತೀರ್ಪಿನಲ್ಲಿ, ಅಪ್ರಾಪ್ತರು ತಪ್ಪಿತಸ್ಥರೆಂದು ಸಾಬೀತಾದರೂ ಗರಿಷ್ಠ 3 ವರ್ಷ ಶಿಕ್ಷೆ ವಿಧಿಸಬಹುದು. 

ಈ ಪ್ರಕರಣದಲ್ಲಿ ಅರ್ಜಿದಾರ ಕೊಲೆ ಆರೋಪದಡಿ ಎರಡೂವರೆ ವರ್ಷದಿಂದ ಜೈಲಿನಲ್ಲಿ ಇದ್ದಾನೆ. ಪ್ರಕರಣದ ಮೊದಲ ಅಪರಾಧಿ ಸೇರಿ ಎಲ್ಲ ಅಪರಾಧಿಗಳಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಹೀಗಾಗಿ, ಅರ್ಜಿದಾರನಿಗೆ ಷರತ್ತುಬದ್ಧ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟಿದೆ. 
ಹಾಗೆಯೇ, ಬಾಲಕ 2 ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯ ನಾಶಪಡಿಸಬಾರದು, ಬಾಲ ನ್ಯಾಯ ಮಂಡಳಿ ಪೂರ್ವಾನುಮತಿ ಇಲ್ಲದೆ ಅದರ ವ್ಯಾಪ್ತಿ ಬಿಟ್ಟು ಹೋಗಬಾರದು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂಬ ಷರತ್ತು ವಿಧಿಸಿ ಜಾಮೀನು ನೀಡಿದೆ.

ಪ್ರಕರಣವೇನು: ಅರ್ಜಿದಾರ ಬಾಲಾಪರಾಧಿ ಸೇರಿ 21 ಮಂದಿ ವಿರುದ್ಧ ಜೆಪಿ ನಗರ ಠಾಣೆ ಪೊಲೀಸರು ಜೋಡಿ ಕೊಲೆ ಪ್ರಕರಣ ದಾಖಲಿಸಿದ್ದರು. ಅಪರಾಧ ನಡೆದ ದಿನ ಅರ್ಜಿದಾರನಿಗೆ 17 ವರ್ಷ ವಯಸ್ಸಾಗಿತ್ತು. ಪೊಲೀಸರ ಬಂಧನದ ಬಳಿಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಲ ನ್ಯಾಯ ಮಂಡಳಿ 2019ರ ಜ.4ರಂದು ವಜಾಗೊಳಿಸಿತ್ತು. ನಂತರ 2020ರ ಜ.31ರಂದು ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಕೂಡ ಜಾಮೀನು ತಿರಸ್ಕರಿಸಿತ್ತು. ಈ ಹಿನ್ನೆಲೆ, ಬಾಲಕ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News