ಓ ಮೆಣಸೇ....

Update: 2022-04-17 19:30 GMT

ನಮ್ಮದು ಯಾವುದೇ ಒಂದು ಧರ್ಮದ ಸರಕಾರ ಅಲ್ಲ
-ಡಾ.ಕೆ.ಸುಧಾಕರ್, ಸಚಿವ
ಹೌದು ಸಾರ್. ನಿಮ್ಮದು ಒಂದು ಜಾತಿಯವರ ಸರಕಾರವಾದ್ದರಿಂದ ಈ ಸ್ಪಷ್ಟನೆಯ ತುರ್ತು ಅಗತ್ಯವಿತ್ತು.

ಅಧಿಕಾರದ ಶಕ್ತಿ ಸ್ಥಾನದಲ್ಲೇ ಜನಿಸಿದೆ. ಆದರೆ ಆದರ ಬಗ್ಗೆ ಆಸಕ್ತಿಯೇ ಬೆಳೆಯಲಿಲ್ಲ
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಜನರಿಗೂ ಅಷ್ಟೇ. ಒಂದು ಕಾಲದಲ್ಲಿ ನಿಮ್ಮ ಪಕ್ಷದ ಬಗ್ಗೆ ಆಸಕ್ತಿ ಇತ್ತು. ಕ್ರಮೇಣ ಕಳೆದುಕೊಂಡರು.

ಪ್ರಧಾನಿ ಮೋದಿ ಹೇಳಿದಂತೆ ಎಲ್ಲರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು -ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
ಅವರ ಮಾತನ್ನು ನಂಬಿ ಪ್ರಶ್ನಿಸಲು ಹೊರಟ ಅನೇಕರು ಪಾಪ ಜೈಲಲ್ಲಿದ್ದಾರೆ.

ಟಿಪ್ಪು ಸುಲ್ತಾನ್ ಕುರಿತ ಸತ್ಯಗಳನ್ನು ಸುಳ್ಳಾಗಿಸಲು ಸಾಧ್ಯವಿಲ್ಲ -ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಸುಳ್ಳುಗಳ ದಟ್ಟಡವಿಯಲ್ಲಿ ಆ ಸತ್ಯಗಳನ್ನು ಜನತೆಗೆ ತಲುಪಿಸುವುದು ಹೇಗೆಂಬುದೇ ಸವಾಲು.

ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಲು 'ಒಂದು ರಾಷ್ಟ್ರ ಒಂದು ಚುನಾವಣೆ ಪದ್ಧತಿ ಅಗತ್ಯ' -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಒಂದು ಪಕ್ಷ ಎಂಬೊಂದು ಪದವನ್ನೂ ಸೇರಿಸಿದರೆ ಘೋಷಣೆ ಪರ್ಫೆಕ್ಟ್ ಆಗಿ ಬಿಡುತ್ತೆ.

ಯಾರೇ ಇರಲಿ ಸಮಾಜದ ಸಾಮರಸ್ಯ ಕದಡುವ ಪ್ರಯತ್ನ ಮಾಡಿದರೆ ಅವರನ್ನು ಮಟ್ಟ ಹಾಕುತ್ತೇವೆ -ಆರಗ ಜ್ಞಾನೇಂದ್ರ, ಸಚಿವ
ಮಟ್ಟ ಹಾಕುವುದೆಂದರೆ ಪಟ್ಟಾಭಿಷೇಕ ಮಾಡುವುದೆಂದು ಅರ್ಥವಲ್ಲವೇ?

ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಶೋಭಾ ಕರಂದ್ಲಾಜೆಯವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು -ವಿನಯಕುಮಾರ್ ಸೊರಕೆ, ಮಾಜಿ ಸಚಿವ
ಅಷ್ಟು ಕಾಲ ಕಾಯಬೇಕೆ?

ನಾನಿನ್ನೂ ಬಿಜೆಪಿ ಸೇರುವ ಬಗ್ಗೆ ಖಚಿತ ನಿರ್ಧಾರ ಮಾಡಿಲ್ಲ -ಬಸವರಾಜ ಹೊರಟ್ಟಿ, ವಿ.ಪ. ಸಭಾಪತಿ
ಡೀಲ್ ಪೂರ್ತಿಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿ.

ದೊಡ್ಡವರು ಆಡುವ ಕೆಲವು ಸಣ್ಣ ಮಾತಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಸಣ್ಣ ಮಾತುಗಳನ್ನಾಡುವವರನ್ನು ದೊಡ್ಡವರೆಂದು ಕರೆಯುವವರಿಗೆ ಉತ್ತರ ಸಿಗಲೇಬೇಕು.


ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಶೋಭೆ ತರುವುದಿಲ್ಲ -ಜೆ.ಸಿ.ಮಾಧುಸ್ವಾಮಿ, ಸಚಿವ
ಯಾವುದೇ ಬೆಳವಣಿಗೆ ಓಟು ತಂದರೆ ಸಾಕು. ಶೋಭೆ ಯಾರಿಗೆ ಬೇಕು?


ಪಾಕಿಸ್ತಾನದ ನಿಜವಾದ ಸ್ವಾತಂತ್ರ ಹೋರಾಟ ಇನ್ನು ಪ್ರಾರಂಭ -ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
ಇಲ್ಲಿ 2014ರಲ್ಲೇ ಸ್ವಾತಂತ್ರ ಸಿಕ್ಕಿದೆ. ನೀವಿನ್ನೂ ಹಿಂದೆಯೇ ಉಳಿದಿದ್ದೀರಿ.

ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ರಾಮನವಮಿ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಕೈಯಲ್ಲೊಂದು ತ್ರಿಶೂಲವನ್ನೂ ಹಿಡಿದುಕೊಂಡು ಜೈ ಮೋದಿ ಎಂದು ಘೋಷಣೆ ಕೂಗತೊಡಗಿದರೆ ಕಾಯಕ ಪೂರ್ತಿಯಾಗುತ್ತೆ.


ಕರ್ನಾಟಕಕ್ಕೆ ತಾಳ್ಮೆ, ಗಾಂಭೀರ್ಯದಿಂದ ಆಡಳಿತ ನಡೆಸುವ ಅತ್ಯುತ್ತಮ ಮುಖ್ಯಮಂತ್ರಿ ಸಿಕ್ಕಿದ್ದಾರೆ -ಶ್ರೀನಿವಾಸಪ್ರಸಾದ್, ಸಂಸದ
ಈ ಬಗೆಯ ತಾಳ್ಮೆ ಮತ್ತು ಗಾಂಭೀರ್ಯ ಶವಗಳಲ್ಲಿ ಮಾತ್ರ ಕಾಣಸಿಗುತ್ತದೆ.


ಸಣ್ಣಪುಟ್ಟ ಕಾರಣಕ್ಕೆ ಪಕ್ಷ ತೊರೆದವರು ಮರಳಿ ಬಂದರೆ ಸ್ವಾಗತಿಸುತ್ತೇನೆ -ಕುಮಾರಸ್ವಾಮಿ, ಮಾಜಿ ಸಿಎಂ|
ಬಿಜೆಪಿಗೆ ಬೆಂಬಲ ನೀಡಿದ್ದನ್ನು ವಿರೋಧಿಸಿ ಹೊರನಡೆದವರನ್ನು ಸ್ವಾಗತಿಸಿದರೆ ಅವರೇನು ಮತ್ತೆ ಹೊರ ನಡೆಯುವ ಸಾಧ್ಯತೆ ಇದೆಯೇ?

ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ಸೇರುವ ಬಗ್ಗೆ ಮಂಡ್ಯದ ಜನ ಹೇಳಬೇಕು -ಸುಮಲತಾ, ಸಂಸದೆ
ಸುಮಲತಾರಲ್ಲಿ ಕಮಲದ ವಾಸನೆ ಹೊಡೆಯುತ್ತಿದೆ ಎಂದು ಮಂಡ್ಯ ಕೂಗಿ ಹೇಳುತ್ತಿದೆ.

ಇತ್ತೀಚೆಗೆ ರಾಜ್ಯದಲ್ಲಿ ಕಂಡುಬರುತ್ತಿರುವ ಅಹಿತಕರ ಬೆಳವಣಿಗೆಗಳಿಗೆ ನನ್ನ ಬೆಂಬಲವಿಲ್ಲ -ಯಡಿಯೂರಪ್ಪ, ಮಾಜಿ ಸಿಎಂ
ಪಟ್ಟ ಕಳೆದುಕೊಂಡ ನಂತರ ಬೊಮ್ಮಾಯಿ ಸಾರ್ ಕೂಡಾ ಇದನ್ನೇ ಹೇಳಲಿದ್ದಾರೆ.

ನೈತಿಕ ಶಿಕ್ಷಣಕ್ಕೆ ಒತ್ತುನೀಡುವ ಉದ್ದೇಶದಿಂದ ಈ ವರ್ಷದಿಂದಲೇ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಲಾಗುವುದು -ಬಿ.ಸಿ.ನಾಗೇಶ್, ಸಚಿವ
ಜೊತೆಗೆ ಮನು ಸ್ಮತಿಯನ್ನೂ ಅಳವಡಿಸಿದರೆ ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತೆ.

ಜನ ಬಯಸಿದರೆ ರಾಜಕೀಯಕ್ಕೆ ಧುಮುಕುಲು ಸಿದ್ಧ -ರಾಬರ್ಟ್ ವಾದ್ರಾ, ಪ್ರಿಯಾಂಕಾ ಗಾಂಧಿ ಪತಿ
ಮುಳುಗುವುದಕ್ಕೆ ಬೇರೆ ಜಾಗ ಸಿಗಲಿಲ್ಲವೇ?


ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಅದೇನು ಕೊತ್ತಂಬರಿ ಸೊಪ್ಪಲ್ಲ -ಶ್ರೀರಾಮುಲು, ಸಚಿವ
ತುರಿಕೆ ಸೊಪ್ಪು ಎನ್ನುವುದು ಜನರಿಗೂ ಗೊತ್ತಾಗಿ ಬಿಟ್ಟಿದೆ.

ಹಿಂದೂ ಮತ ಬ್ಯಾಂಕ್ ಕ್ರೋಡೀಕರಣ ಮಾಡುವಂತಹ ಅವಶ್ಯಕತೆ ಬಿಜೆಪಿಗಿಲ್ಲ -ನಳಿನ್ ಕುಮಾರ್ ಕಟೀಲು, ಸಂಸದ
ಮುಸ್ಲಿಮ್ ದ್ವೇಷ ಹಬ್ಬಿದರೆ ಸಾಕು, ಬೇರೆಲ್ಲವೂ ತನ್ನಿಂತಾನೇ ಆಗಿ ಬಿಡುತ್ತದೆ.


ಯಾವುದೇ ಕಾರಣಕ್ಕೂ ವಿದೇಶಿ ಶಕ್ತಿಗಳಿಗೆ ರಶ್ಯವನ್ನು ಏಕಾಂಗಿಯಾಗಿಸಲು ಸಾಧ್ಯವಿಲ್ಲ -ವ್ಲಾದಿಮಿರ್ ಪುಟಿನ್, ರಶ್ಯ ಅಧ್ಯಕ್ಷ
ನೀವಿರುವಾಗ ವಿದೇಶಿ ಶಕ್ತಿಗಳ ಅಗತ್ಯವೂ ಇಲ್ಲ.

ದೇಶದ ಜನತೆಯ ಕಲ್ಯಾಣಕ್ಕಾಗಿ ಪಕ್ಷಭೇದ ಮೀರಿ ಶ್ರಮಿಸೋಣ -ಅಮಿತ್ ಶಾ, ಕೇಂದ್ರ ಸಚಿವ
ಪಕ್ಷ ಭೇದಗಳನ್ನು ಸೃಷ್ಟಿಸಿ ಜನತೆಯ ಕೊಲ್ಲೋಣ ಎಂದು ಕೇಳಿಸುತ್ತಿದೆ.

ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ರಾಜ್ಯದಲ್ಲಿ ನಡೆಯುತ್ತಿರುವ ದೊಂಬಿ, ಗಲಾಟೆಯ ಬಗ್ಗೆ ಮೌನವಾಗಿರುವ ಕಾರಣ ತಿಳಿಯಿತು ಬಿಡಿ

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...