×
Ad

ಮಠಗಳಿಗೆ ಬಿಡುಗಡೆಯಾಗುವ ಅನುದಾನ ಪಡೆಯಲೂ ಶೇ.30ರಷ್ಟು ಕಮಿಷನ್‌ ನೀಡಬೇಕಿದೆ: ದಿಂಗಾಲೇಶ್ವರ ಸ್ವಾಮೀಜಿ

Update: 2022-04-18 11:11 IST

ಬಾಗಲಕೋಟೆ, ಎ.18: ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲಿಗೆ ತಲುಪಿದೆಯೆಂದರೆ ಮಠಗಳಿಗೆ ಸರಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲೂ ಶೇ.30ರಷ್ಟು ಕಮಿಷನ್‌ ನೀಡಬೇಕಿದೆ ಎಂದು ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.

ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆಯು ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ರವಿವಾರ ಆಯೋಜಿಸಿದ್ದ ಕೃಷ್ಣಾ–ಮಹಾದಾಯಿ–ನವಲಿ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮಠಗಳಿಗೆ ಬಿಡುಗಡೆ ಆದ ಅನುದಾನದಲ್ಲಿ ಪರ್ಸೆಂಟೇಜ್ ಕಡಿತ ಆದ ಬಳಿಕವಷ್ಟೇ ಕಟ್ಟಡದ ಕೆಲಸಗಳು ಆರಂಭವಾಗುತ್ತವೆ. ಇಲ್ಲದಿದ್ದರೆ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗಂತೂ ಬುದ್ಧಿಗೇಡಿ ಸರಕಾರಗಳು ಬರುತ್ತಿವೆ. ಉತ್ತರ ಭಾರತದಲ್ಲಿ ಒಂದು ವರ್ಷ ಕಾಲ ಸಾವು–ನೋವಿಗೂ ಅಂಜದೇ ರೈತರು ನಡೆಸಿದ ಹೋರಾಟದ ಮಾದರಿಯ ಪ್ರತಿಭಟನೆಗೆ ರಾಜ್ಯದ ರೈತರು ಸಿದ್ಧರಾದರೆ ಮಾತ್ರ ಅನ್ನ ಸಿಕ್ಕೀತು. ಇಲ್ಲದಿದ್ದರೆ ಏನೂ ಸಿಗಲಾರದು. ಬಹಳ ಜಾಣರಾಗಬೇಕು’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ರೈತರಿಗೆ ಕಿವಿಮಾತು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ಉತ್ತರ ಕರ್ನಾಟಕದವರೇ ಆಗಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ.

- ದಿಂಗಾಲೇಶ್ವರ ಸ್ವಾಮೀಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News