ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಟೆಂಡರ್ ಹಿಂಪಡೆಯಲಾಗಿದೆ: ಹೈಕೋರ್ಟ್‍ಗೆ ಹೇಳಿಕೆ
ಬೆಂಗಳೂರು, ಎ.18: ಕರ್ನಾಟಕದಲ್ಲಿ ವಾಹನಗಳಿಗೆ ಹೈಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್(ಎಚ್‍ಎಸ್‍ಆರ್‍ಪಿ) ಅಳವಡಿಕೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯು ಕಳೆದ ಮಾ.29ರಂದು ಹೊರಡಿಸಿದ್ದ ಟೆಂಡರ್ ಅನ್ನು ಹಿಂಪಡೆಯಲಾಗಿದೆ ಎಂದು ಹೈಕೋರ್ಟ್‍ಗೆ ರಾಜ್ಯ ಸರಕಾರ ತಿಳಿಸಿದೆ.
ಟೆಂಡರ್ ಪ್ರಶ್ನಿಸಿ ಹಲವು ಸಂಸ್ಥೆಗಳು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯಿತು. ಕಳೆದ ವರ್ಷ ಆ.1ರಂದು ನಂಬರ್ ಪ್ಲೇಟ್‍ಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಟೆಂಡರ್ ಕರೆದಿತ್ತು. ಟೆಂಡರ್ ಪ್ರಶ್ನಿಸಿ ಹಲವು ಸಂಸ್ಥೆಗಳು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದವು. ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರವು ತನ್ನ ಆದೇಶವನ್ನು ಹಿಂಪಡೆದಿದೆ.
ಸಾರಿಗೆ ಅಧಿಕಾರಿಗಳಿಗೆ ಲಂಚ ಪಡೆಯಲು ಅವಕಾಶ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಈ ವ್ಯವಸ್ಥೆಯನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಹಲವರು ದೂರಿದ್ದರು. ರಾಜ್ಯದಲ್ಲಿರುವ 1.76 ಕೋಟಿ ಹಳೆಯ ವಾಹನಗಳಿಗೂ ಹೊಸ ಮಾದರಿಯ ನಂಬರ್ ಪ್ಲೇಟ್ ಅಳವಡಿಸಬೇಕು ಎನ್ನುವ ಸೂಚನೆ ಇದ್ದ ಕಾರಣ ವಾಹನ ಬಳಕೆದಾರರಲ್ಲಿ ಗೊಂದಲ ಮನೆಮಾಡಿತ್ತು. ಕೊನೆಗೆ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸರಕಾರವು ಟೆಂಡರ್ ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದೆ.