ಮಾಹಿತಿ ತಂತ್ರಜ್ಞಾನ, ನವೋದ್ಯಮ ರಾಜಧಾನಿಯಾಗಿದ್ದ ಕರ್ನಾಟಕವನ್ನು ಬಿಜೆಪಿ ಭ್ರಷ್ಟಾಚಾರ ರಾಜಧಾನಿ ಮಾಡಿದೆ: ಡಿಕೆಶಿ
ಬೆಂಗಳೂರು, ಎ.18: ಮಾಹಿತಿ ತಂತ್ರಜ್ಞಾನ, ನವೋದ್ಯಮ ರಾಜಧಾನಿಯಾಗಿದ್ದ ಕರ್ನಾಟಕವನ್ನು ಬಿಜೆಪಿ ಸರಕಾರವು ಭ್ರಷ್ಟಾಚಾರ ರಾಜಧಾನಿಯನ್ನಾಗಿ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಗಳಿಗೆ ನೀಡುವ ಅನುದಾನದಲ್ಲೂ ಶೇ.30 ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದಕ್ಕೆಲ್ಲ ಯಾರು ಹೊಣೆ. ದಿನನಿತ್ಯ ಇಂತಹ ಪ್ರಕರಣಗಳು ಹೊರಬರುತ್ತಿವೆ. ಮಾಹಿತಿ ತಂತ್ರಜ್ಞಾನ, ನವೋದ್ಯಮ ರಾಜಧಾನಿಯಾಗಿದ್ದ ಕರ್ನಾಟಕವನ್ನು ಭ್ರಷ್ಟಾಚಾರ ರಾಜಧಾನಿಯನ್ನಾಗಿ ಮಾಡಿದ್ದಾರೆ ಎಂದು ದೂರಿದರು.
ಪ್ರಧಾನಿ ಮೋದಿ ಅವರು ದೇಶದ ವ್ಯವಸ್ಥೆ ಸರಿಪಡಿಸುವುದಾಗಿ ಹೇಳಿದ್ದರು. ಆದರೆ ಈಗ ಏನಾಗಿದೆ. ಇದು ಕೇವಲ ರಾಜ್ಯದ್ದು ಮಾತ್ರವಲ್ಲ, ದೇಶದ ಘನತೆ ಪ್ರಶ್ನೆ. ಕೋಮು ಗಲಭೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈ ಮಧ್ಯೆ ಧಾರ್ಮಿಕ ದ್ವೇಷ ಹಬ್ಬಿಸುತ್ತಿದ್ದಾರೆ. ಈ ಎಲ್ಲ ಪರಿಸ್ಥಿತಿಗೆ ಬಿಜೆಪಿ ಸರಕಾರದ ದೌರ್ಬಲ್ಯವೇ ಕಾರಣ ಎಂದರು.
ಒದ್ದು ಒಳಗೆ ಹಾಕಲಿ: ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧ ಯಾವುದೇ ಪ್ರಭಾವಿ ವ್ಯಕ್ತಿಯ ಕೈವಾಡ ಇದ್ದರೂ ಅವರನ್ನು ಒದ್ದು ಒಳಗೆ ಹಾಕಲಿ, ನನ್ನ ಕೈವಾಡ ಇದ್ದರೂ ನನ್ನನ್ನು ಒಳಗೆ ಹಾಕಲಿ ಎಂದ ಅವರು, ಪಿಎಸ್ಸೈ ನೇಮಕಾತಿ ಅಕ್ರಮ ಯಾವ ಕಾಲದಲ್ಲೂ ಇಂತಹ ಅಕ್ರಮ ನಡೆದಿರಲಿಲ್ಲ. ಅಷ್ಟೇ ಅಲ್ಲದೆ, ಈ ಹಿಂದೆ ಕೆಲವು ಅಕ್ರಮ ನೋಡಿದ್ದೇವೆ. ನಾನು ಕೂಡ ಇಂಧನ ಸಚಿವ ಆಗಿದ್ದಾಗ 30-40 ಸಾವಿರ ಹುದ್ದೆಗಳ ಭರ್ತಿ ಮಾಡಿದ್ದು, ದೈಹಿಕ ಪರೀಕ್ಷೆಯನ್ನು ವಿಡಿಯೊ ಮಾಡಿಸಿದ್ದೆ. ಒಬ್ಬರೂ ನಮ್ಮ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿಲ್ಲ ಎಂದರು.
ಅವರ ಮೇಲೂ ಎಫ್‍ಐಆರ್ ಹಾಕಲಿ: ಕಾಂಗ್ರೆಸ್ ನಾಯಕರ ಮೇಲೆ ಎಫ್‍ಐಆರ್ ದಾಖಲು ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಮುಖ್ಯಮಂತ್ರಿ ಮನೆಗೆ ಘೇರಾವ್ ಹಾಕಲು ಹೋದಾಗ ನಮ್ಮನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಈಶ್ವರಪ್ಪ ಅವರು ಮೆರವಣಿಗೆ ಮೂಲಕ ಮುಖ್ಯಮಂತ್ರಿ ಮನೆಗೆ ಬಂದು ರಾಜೀನಾಮೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅವರು ಕೂಗಾಟ, ಚೀರಾಟ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದರು.
ಜತೆಗೆ, ಶಿವಮೊಗ್ಗದಲ್ಲಿ ಈಶ್ವರಪ್ಪ ಸೆಕ್ಷನ್ 144 ಉಲ್ಲಂಘನೆ ಮಾಡಿ ಹರ್ಷ ಶವಯಾತ್ರೆ ಮಾಡಿದರೂ ಪ್ರಕರಣ ಹಾಕಲಿಲ್ಲ. ಹೀಗೆ ಹಲವು ಬಾರಿ ಬಿಜೆಪಿ ನಾಯಕರು ಕಾನೂನು ಉಲ್ಲಂಘಿಸಿದರೂ ಅವರ ಮೇಲೆ ಪ್ರಕರಣ ಹಾಕದೆ, ನಮ್ಮ ಮೇಲೆ ಮಾತ್ರ ದಾಖಲಿಸುತ್ತಿದ್ದಾರೆ ಎಂದು ಟೀಕಿಸಿದರು.