ಪಂಚಮಸಾಲಿಗೆ 2ಎ ಮೀಸಲಾತಿ: ಎ.21ರಿಂದ ಅನಿರ್ದಿಷ್ಟಾವಧಿ ಧರಣಿ; ಜಯ ಮೃತ್ಯುಂಜಯ ಶ್ರೀ

Update: 2022-04-18 16:44 GMT

ಬೆಂಗಳೂರು, ಎ.18: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2ಎ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಎ.21ರಿಂದ ಕೂಡಲ ಸಂಗಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯ ಮೃತ್ಯುಂಜಯ ಶ್ರೀ ಹೇಳಿದ್ದಾರೆ.

ಸೋಮವಾರ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಸಮಿತಿ ಮುಖಂಡರ ಜತೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮೂರು ಬಾರಿ ಗಡುವು ಕೊಟ್ಟರೂ ಸರಕಾರ ಬೇಡಿಕೆ ಈಡೇರಿಸಿಲ್ಲ. ಸರಕಾರದ ಮೇಲೆ ನಂಬಿಕೆ ಇಟ್ಟಿದ್ದೆವು. ಸರಕಾರ ಕೊಟ್ಟ ಮಾತಿಗೆ ತಪ್ಪಿದೆ. ಹೀಗಾಗಿ, ಈಗ ಅನಿವಾರ್ಯವಾಗಿ ಹೋರಾಟ ಆರಂಭಿಸುತ್ತಿದ್ದೇವೆ ಎಂದರು.

ಪಂಚಮಸಾಲಿ, ಲಿಂಗಾಯತ ಗೌಡ, ಮಲಯಗೌಡ, ದೀಕ್ಷ ಲಿಂಗಾಯತರು ಸೇರಿ ಹೋರಾಟ ನಡೆಸಲಾಗುವುದು. ಮೊದಲು ಕೂಡಲ ಸಂಗಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು. 2ನೆ ಹಂತದಲ್ಲಿ ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುವುದು. ಮೇ 21ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು. ಅದಕ್ಕೂ ಸರಕಾರ ಮಣಿಯದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಭರವಸೆ ಇತ್ತು. ಆದರೆ, ನಂಬಿಕೆ ಹುಸಿಯಾಗಿದೆ. ಜನರಲ್ಲಿ ಅಸಮಾಧಾನ ಉಂಟಾಗಿದೆ. ಆದುದರಿಂದಲೇ ಐದು ಹಂತದ ಹೋರಾಟ ಆರಂಭಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಪ್ರವರ್ಗ 2ಎ ಪಟ್ಟಿಗೆ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರಿಸುವ ಆದೇಶ ಹೊರಬೀಳುವವರೆಗೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆದು ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆಯೋಗದಿಂದ ವರದಿ ಪಡೆಯಲು ಒಂದು ವರ್ಷ ಬೇಕಿದೆಯೆ? ಕೊರೋನ ಮತ್ತಿತರ ಕಾರಣಗಳನ್ನು ನೀಡುತ್ತಾ ಕಾಲಹರಣ ಮಾಡಲಾಗುತ್ತಿದೆ. ಈ ನಿಲುವು ವಿರೋಧಿಸಿ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಒಬ್ಬರು ಜನಪ್ರತಿನಿಧಿ ದೂರ ಇದ್ದಾರೆ: ಪಂಚಮಸಾಲಿ ಸಮುದಾಯದ ಶಾಸಕರು, ಸಚಿವರು ಮತ್ತು ಸಂಸದರ ಪೈಕಿ ಒಬ್ಬರು ಮಾತ್ರ ಈ ಹೋರಾಟದಿಂದ ದೂರ ಇದ್ದಾರೆ. ಅವರಿಗೆ ಯಾವ ಅಡ್ಡಿ ಇದೆಯೋ ಗೊತ್ತಿಲ್ಲ. ಉಳಿದ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಟ್ಟಿಯಾಗಿ ಬೆಂಬಲಕ್ಕೆ ನಿಂತಿದ್ದಾರೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೂಡ ಬೆಂಬಲಿಸುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News