ಮಂಡ್ಯ | ಚಿನ್ನಾಭರಣ ದರೋಡೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

Update: 2022-04-18 14:30 GMT

ಮಂಡ್ಯ, ಎ.18: ಕೆರಗೋಡು ಠಾಣೆ ವ್ಯಾಪ್ತಿಯ ಗಂಟಗೌಡನಹಳ್ಳಿ ಬಳಿ ಎ.14ರಂದು ಕಾರನ್ನು ಅಡ್ಡಗಟ್ಟಿ ಚಿನ್ನಾಭರಣ ದರೋಡೆ ಮಾಡಿದ್ದ ಆರೋಪಿಗಳನ್ನು 48 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ರಿಷಬ್ ಜ್ಯೂವೆಲ್ಸ್ ಅಂಗಡಿಯ ಮಾಜಿ ಕೆಲಸಗಾರ ರಮೇಶ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿ ದರೋಡೆ ಮಾಡಿದ್ದ 3 ಕೆ.ಜಿ, 100 ಗ್ರಾಂ ಚಿನ್ನಾಭರಣ, 50 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಬೈಕ್ ಸೇರಿದಂತೆ ಒಟ್ಟು 80 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಯತೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಿಷಬ್ ಜ್ಯೂವೆಲ್ಸ್ ಅಂಗಡಿ ಮಾಲಕ ರಿಷಬ್ ಮಂಡ್ಯ ಜಿಲ್ಲೆಯ ಮಂಡ್ಯ, ಬಸರಾಳು, ಜಕ್ಕನಹಳ್ಳಿ, ಕೆರಗೋಡು, ಚೀಣ್ಯ ಭಾಗದ ಚಿನ್ನದ ಅಂಗಡಿಳಿಗೆ ಆಭರಣ ಪೂರೈಸಲು ಒಡಂಬಡಿಕೆ ಮಾಡಿಕೊಂಡಿದ್ದು, ತನ್ನ ಸಿಬ್ಬಂದಿ ಮಾಧೂರಾಂ ಮತ್ತು ಲಲಿತ್ ಎಂಬ ಇಬ್ಬರು ವ್ಯಕ್ತಿಗಳನ್ನು ಆಭರಣ ಪೂರೈಕೆಗಾಗಿ ಅ.14ರಂದು ಕಳುಹಿಸಿದ್ದರು.

ಜಕ್ಕನಹಳ್ಳಿ, ಬಸರಾಳು ಅಂಗಡಿಗಳಿಗೆ ಆಭರಣ ವಿತರಣೆ ಮಾಡಿ ಕೆರಗೋಡು ಅಂಗಡಿಗಳಿಗೆ ವಿತರಣೆ ಮಾಡಲು ಬರುತ್ತಿದ್ದಾಗ ಗಂಟಗೌಡನಹಳ್ಳಿ ಬಳಿ ಕಾರು ಮತ್ತು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು, ಕಾರನ್ನು ಅಡ್ಡಗಟ್ಟಿ ಮಾಧೂರಾಂ ಹಾಗೂ ಲಲಿತ್ ಎಂಬುವರ ಮೇಲೆ ಹಲ್ಲೆ ನಡೆಸಿ ಚಿನ್ನದ ವಡವೆಗಳನ್ನು ದೋಚಿ ಪರಾರಿಯಾಗಿದ್ದರು.

ದುಷ್ಕರ್ಮಿಗಳ ಪತ್ತೆಗೆ ಕೆರೆಗೋಡು ಸಿಪಿಐ ಕ್ಯಾತೇಗೌಡ, ಪಿಎಸ್ಸೈ ರಮೆಶ್, ಸಿಬ್ಬಂದಿಗಳಾದ ರಾಜೇಗೌಡ, ಮಧುಕುಮಾರ್, ಇಂದ್ರಕುಮಾರ್, ಗಿರೀಶ್ ಒಳಗೊಂಡ ಒಂದು ತಂಡ, ಜತೆಗೆ ತಾಂತ್ರಿಕ, ಸಿಸಿಟಿವಿ, ಮಾಹಿತಿ ತಂಡಗಳನ್ನು ತಂಡಗಳನ್ನು ರಚಿಸಿದ್ದು, ಕೃತ್ಯ ಎಸಗಿದ್ದ ರಮೇಶ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ. ಕ್ಷಿಪ್ರಗತಿಯಲ್ಲಿ ಆರೋಪಿಗಳ ಪತ್ತೆ ಹಚ್ಚಿದ ತಂಡಗಳಿಗೆ 25 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಎಂ.ವೇಣುಗೋಪಾಲ್, ಮಂಡ್ಯ ಉಪವಿಭಾಗದ ಡಿವೈಎಸ್ಪಿ ಮಂಜುನಾಥ್, ಹಾಗೂ ಪತ್ತೆತಂಡದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News