ಕ್ಷೀರ ಬ್ಯಾಂಕ್‍ಗೆ 15 ದಿನದಲ್ಲಿ ಕಾನೂನು ಸ್ವರೂಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-04-18 14:47 GMT

ಬೆಂಗಳೂರು, ಎ.18: ಕ್ಷೀರ ಬ್ಯಾಂಕ್ 15 ದಿನದಲ್ಲಿ ಕಾನೂನು ಸ್ವರೂಪ ಪಡೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ನಗರದ ನಾಗದೇವನಹಳ್ಳಿಯಲ್ಲಿನ ಜ್ಞಾನಭಾರತಿ ಬಡಾವಣೆಯಲ್ಲಿ ಮಾಸ್ತಿ ಭವನ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಾನು ಕ್ಷೀರ ಬ್ಯಾಂಕ್ ಆಗಬೇಕೆಂದು ಸೋಮಶೇಖರ್ ಅವರಿಗೆ ಸೂಚಿಸಿದೆ. ಕೂಡಲೇ ಅದಕ್ಕೆ ಬೇಕಾದ ಎಲ್ಲ್ಲ ರೀತಿಯ ತಯಾರಿ ಮಾಡಿಕೊಂಡು ಗೃಹ ಸಚಿವ ಅಮಿತ್ ಶಾ ಅವರನ್ನು ಬೆಂಗಳೂರಿಗೆ ಆಹ್ವಾನಿಸಿ ಅದರ ಲೋಗೋ ಕೂಡ ಬಿಡುಗಡೆ ಮಾಡಿಸಿದರು. ಇದೀಗ 15 ದಿನದಲ್ಲಿ ಕಾನೂನು ಸ್ವರೂಪ ಪಡೆದುಕೊಳ್ಳಲಿದೆ ಎಂದರು.

ಸೋಮಶೇಖರ್ ಅವರಿಗೆ ಅಸಾಧ್ಯವಾದದನ್ನು ಸಾಧ್ಯವಾಗಿಸುವ ಶಕ್ತಿಯಿದೆ. ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದಾರೆ ಎಂದರು.

ನಾನು ಮುಖ್ಯಮಂತ್ರಿ ಆಗುತ್ತಿದ್ದಂತೆ ಎಸ್.ಟಿ.ಸೋಮಶೇಖರ್ ಅವರು ಯಶಸ್ವಿನಿ ಯೋಜನೆ ಮರುಜಾರಿ ಮಾಡಿ ಯಶಸ್ವಿ ಮಾಡುವಂತೆ ಮನವಿ ಮಾಡಿದರು. ಆನಂತರ 22 ರಿಂದ 32 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ಮಾಡಿ ರೈತರ ಸಹಾಯಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು. 

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಯಾವುದೇ ಸಮಸ್ಯೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರೆ ತಕ್ಷಣ ಪರಿಹಾರ ಮಾಡುತ್ತಾರೆ ಎಂಬುದಕ್ಕೆ ಮಾಸ್ತಿ ಭವನ ಶಿಲಾನ್ಯಾಸ ಕಾರ್ಯಕ್ರಮವೇ ಸಾಕ್ಷಿ ಎಂದರು. 

ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದಿದೆ. ನಗರದ ಜನತೆಗೆ ಯಾವುದೇ ತೊಂದರೆಯಾಗದಂತೆ ನಗರದ ಅಭಿವೃದ್ದಿಗಾಗಿ ಒಂದೇ ದಿನ 8 ಸಾವಿರ ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕøತ ಸಾಹಿತಿ ಚಂದ್ರಶೇಖರ ಕಂಬಾರ ಉಪಸ್ಥಿತರಿದ್ದರು. 

ಬೆಂಗಳೂರು ಅಂತರ್‍ರಾಷ್ಟ್ರೀಯ ಸ್ಮಾರ್ಟ್ ಸಿಟಿ 

ಮೆಟ್ರೋ, ಸಬ್ ಅರ್ಬನ್ ರೈಲು, ರಸ್ತೆ, ಹೊಸ ಬಡಾವಣೆಗಳ ನಿರ್ಮಾಣ, ಸ್ಯಾಟಿಲೈಟ್ ಟೌನ್‍ಗಳ ನಿರ್ಮಾಣಗಳ ಮೂಲಕ ಬೆಂಗಳೂರನ್ನು ಅಂತರ್‍ರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಸಿಟಿಯನ್ನಾಗಿಸುವ ದೂರದೃಷ್ಟಿಯ ಚಿಂತನೆಯನ್ನು ಸರಕಾರ ಹೊಂದಿದೆ. ಅಭಿವೃಧ್ದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಬೆಂಗಳೂರಿನ ಸಂಪೂರ್ಣ ಚಿತ್ರಣ ಬದಲಾಗಲಿದೆ. ಅದಕ್ಕೆ ಸರಕಾರ ಬದ್ಧವಾಗಿದೆ. ಬೆಂಗಳೂರನ್ನು ಅಂತರರಾಷ್ಟ್ರೀಯ ಬ್ರ್ಯಾಂಡ್ ಮಾಡುವ ಮೂಲಕ ಆರ್ಥಿಕತೆಗೆ ಇಂಬು ನೀಡಲಾಗುತ್ತದೆ. ಬೆಂಗಳೂರು ಭಾರತ, ಕರ್ನಾಟಕ ಹೆಮ್ಮೆ ಪಡುವ ನಗರವಾಗಲಿದೆ. 

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಮಾಸ್ತಿ ಭವನದಲ್ಲಿ ಸಾಹಿತ್ಯಾತ್ಮಕ ಸಂಶೋಧನೆ

ವಿಭಿನ್ನ ದೃಷ್ಟಿಕೋನ, ವಾಸ್ತವಾಂಶದ ನೆಲೆಗಟ್ಟಿನ ವಿಶ್ಲೇಷಣೆ, ವೈಚಾರಿಕತೆಯನ್ನು ಮಾಸ್ತಿಯರ ಕೃತಿಗಳಲ್ಲಿ ಕಾಣಬಹುದು. ಮಾಸ್ತಿಯವರ ವಿಚಾರ ಭಂಡಾರ ಇವತ್ತಿನ ಕಾಲಕ್ಕೆ ಯಾವ ರೀತಿ ಸಾಮ್ಯತೆ, ಭಿನ್ನತೆಗಳಿವೆ ಎನ್ನುವ ಬಗ್ಗೆ ಚಿಂತನೆ, ಸಾಹಿತ್ಯಾತ್ಮಕ ಸಂಶೋಧನಾ ಕಾರ್ಯಗಳು ಮಾಸ್ತಿ ಭವನದಲ್ಲಿ ಆಗಬೇಕು. ಮಾಸ್ತಿ ಭವನದ ಕಟ್ಟಡ ನಿರ್ಮಾಣಕ್ಕೆ ಸರಕಾರದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದರು.
ಮಾಸ್ತಿಯವರ ಸಾಹಿತ್ಯದ ಎಲ್ಲ ಚಟುವಟಿಕೆಗಳು ಭವನದಲ್ಲಿ ಆಗಲಿದೆ. ಮಾಸ್ತಿ ಅವರು ಸಾಹಿತ್ಯ ಲೋಕಕ್ಕೆ ನೀಡಿರುವ ಆಸ್ತಿ ಈ ಭವನದ ಮೂಲಕ ಮುಂದಿನ ಜನಾಂಗಕ್ಕೂ ಮುಂದುವರೆಯಲಿದೆ ಎಂಬ ವಿಶ್ವಾಸವಿದೆ. ಮಾಸ್ತಿಯವರು ಕೇವಲ ಕರ್ನಾಟಕದ ಆಸ್ತಿಯಲ್ಲ, ಭಾರತ ದೇಶದ ಆಸ್ತಿಯನ್ನಾಗಿ ಮಾಡುವ ಆಶಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News