ಪಿಎಸ್ಸೈ ನೇಮಕಾತಿಯಲ್ಲಿ 300 ಅಭ್ಯರ್ಥಿಗಳ ಅಕ್ರಮ ಆಯ್ಕೆ: ಪ್ರಿಯಾಂಕ್ ಖರ್ಗೆ

Update: 2022-04-18 15:19 GMT

ಬೆಂಗಳೂರು, ಎ.18: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದರೆ, 300 ಅಭ್ಯರ್ಥಿಗಳ ಅಕ್ರಮ ಆಯ್ಕೆ ಬೆಳಕಿಗೆ ಬರುವ ಜೊತೆಗೆ, ಸಚಿವ ಸಂಪುಟದ ನಾಲ್ವರು ರಾಜೀನಾಮೆ ನೀಡುವ ಸಾಧ್ಯತೆಯೂ ಇದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಿಎಸ್ಸೈ ನೇಮಕಾತಿ ಅಕ್ರಮವನ್ನು ಸರಿಯಾಗಿ ತನಿಖೆ ನಡೆಸಿದರೆ ಈ ಶೇ.40ರಷ್ಟು ಕಮಿಷನ್ ಸರಕಾರದಲ್ಲಿ ಮೂರರಿಂದ ನಾಲ್ಕು ಸಚಿವರು ರಾಜೀನಾಮೆ ನೀಡಿ, ಅರ್ಧ ಸಚಿವ ಸಂಪುಟವೇ ಖಾಲಿಯಾಗಲಿದೆ ಎಂದರು.

ಅಷ್ಟೇ ಅಲ್ಲದೆ, 545ರಲ್ಲಿ 300 ಮಂದಿ ಅಕ್ರಮ ಆಯ್ಕೆ ಆಗಿದ್ದು, ಪ್ರತಿ ಅಭ್ಯರ್ಥಿಯಿಂದ ಕನಿಷ್ಠ 70ರಿಂದ 80 ಲಕ್ಷ ಲಂಚ ಪಡೆದಿದ್ದು, 210 ಕೋಟಿ ಅವ್ಯವಹಾರ ನಡೆದಿದೆ. ಒಂದು ವೇಳೆ ಸಿಬಿಐ, ಈಡಿ, ಐಟಿ ದಾಳಿ ನಡೆಸಿದರೆ ಗೃಹ ಸಚಿವರೂ ಸೇರಿ, ಯಾರಿಗೆ ಎಷ್ಟು ಪಾಲು ಹೋಗಿದೆ ಎಂಬ ಸತ್ಯ ಹೊರಬರಲಿದೆ ಎಂದು ತಿಳಿಸಿದರು.

ಇದುವರೆಗೂ ತಲೆಮರೆಸಿಕೊಂಡಿರುವ ಬಿಜೆಪಿ ಪದಾಧಿಕಾರಿಗಳ ಬಂಧನವಾಗಿಲ್ಲ. ಸಣ್ಣ ಪುಟ್ಟವರನ್ನು ಬಂಧಿಸಿ, ಪದಾಧಿಕಾರಿಗಳನ್ನು ಯಾಕೆ ಬಂಧಿಸಲು ಆಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬಂದಿರುವ ಅಭ್ಯರ್ಥಿ ಸಮವಸ್ತ್ರ ಧರಿಸಿ 2 ಸ್ಟಾರ್ ಹಾಕಿಕೊಂಡು ಓಡಾಡುತ್ತಿದ್ದಾನೆ. ಈ ಇಲಾಖೆ ಎಷ್ಟು ಅಯೋಗ್ಯವಾಗಿದೆ ಎಂದರೆ, ಅಭ್ಯರ್ಥಿಗಳಿಂದಲೇ ಸಾಕ್ಷಿ ಕೇಳಿ ತನಿಖೆ ಹೇಗೆ ಮಾಡಬೇಕು ಎಂದು ಕೇಳುತ್ತಾರೆ ಎಂದು ವ್ಯಂಗ್ಯವಾಡಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾರ್ಚ್ ತಿಂಗಳಲ್ಲಿ ನಡೆದ ಅಧಿವೇಶನದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಇದೇ ವಿಚಾರವಾಗಿ ಒಟ್ಟು ಆರು ಬಾರಿ ಸುಳ್ಳು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರು ಈ ಬಗ್ಗೆ ಕೇಳಿದರೆ ದೂರು ಬಂದಿಲ್ಲ ಎನ್ನುತ್ತಾರೆ. ಬಿಜೆಪಿ ಶಾಸಕರು ಈ ಬಗ್ಗೆ ಪ್ರಶ್ನೆ ಮಾಡಿದರೆ ದೂರು ಬಂದಿದೆ, ಪರಿಶೀಲನೆ ಮಾಡಿದ್ದು ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.

ಬಿಜೆಪಿ ಸರಕಾರದ ಧನದಾಹಕ್ಕೆ ಲಕ್ಷಾಂತರ ಯುವಕ, ಯುವತಿಯರ ಭವಿಷ್ಯವನ್ನೇ ನಾಶವಾಗಿದೆ. ಸಾಕಷ್ಟು ಯುವಕರು ತಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಲು ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಆದರೆ ಈ ನೀಚ ಸರಕಾರ ಬಡವರ ಕನಸಿಗೆ ಕೊಳ್ಳಿ ಇಟ್ಟು ಕಮಿಷನ್ ಪಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News