×
Ad

ಪ್ರಧಾನಿ ಮೋದಿಯಿಂದ ಜನರಿಗೆ ತಿರುಪತಿ ನಾಮ: ಸಿದ್ದರಾಮಯ್ಯ ಟೀಕೆ

Update: 2022-04-18 21:53 IST

ಮಂಡ್ಯ, ಎ.18: ‘ಬಿಜೆಪಿ ಸುಳ್ಳಿನ ಕಾರ್ಖಾನೆ. ನೀಡಿದ್ದ ಒಂದು ಭರವಸೆಯನ್ನೂ ಈಡೇರಿಸಿಲ್ಲ. ತಮ್ಮನ್ನು ನಂಬಿದ ಜನರಿಗೆ ನರೇಂದ್ರಮೋದಿ ತಿರುಪತಿ ತಿಮ್ಮಪ್ಪನ ಮೂರು ನಾಮ ಹಾಕಿದರು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಿಜೆಪಿ ಸರಕಾರದ ಭ್ರಷ್ಟಾಚಾರ, ಅಗತ್ಯವಸ್ತುಗಳ ಬೆಲೆಯೇರಿಕೆ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಸೋಮವಾರ ಕಾಂಗ್ರೆಸ್ ಏರ್ಪಡಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

‘ದೇಶಕ್ಕೆ ಅಚ್ಚೇದಿನ್ ಬಂತಾ? ಕಪ್ಪು ಹಣ ತಂದ್ರಾ? ಭ್ರಷ್ಟಾಚಾರ ಹೋಯ್ತಾ? ವರ್ಷಕ್ಕೆ ಎರಡು ಸಾವಿರ ಉದ್ಯೋಗ ಕೊಟ್ರಾ? ರೈತರ ಆದಾಯ ದ್ವಿಗುಣ ಮಾಡಿದ್ರಾ? ಮೋದಿ ಅವರೇ ಬರೀ ಸುಳ್ಳು ಏಕೆ ಹೇಳ್ತೀರಿ?’ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಪೆಟ್ರೋಲ್, ಡೀಸಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ಕಬ್ಬಿಣ, ಸಿಮೆಂಟ್, ರಾಸಾಯನಿಕ ಗೊಬ್ಬರ ಸೇರಿದಂತೆ ಎಲ್ಲಾ ಬಗೆಯ ಅಗತ್ಯವಸ್ತುಗಳ ದರ ಗಗನಕ್ಕೇರಿದೆ. 11 ಕೋಟಿ ಉದ್ಯೋಗ ಸೃಷ್ಟಿಸುತ್ತಿದ್ದ ಸಣ್ಣ ಕೈಗಾರಿಕೆಗಳು ಮುಚ್ಚುತ್ತಾ ಹೋಗಿ ಉದ್ಯೋಗ ಸೃಷ್ಟಿ ಸಂಖ್ಯೆ 1 ಕೋಟಿಗೆ ಬಂದು ನಿಂತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು 40 ಪರ್ಸೆಂಟ್ ಲಂಚ ಕೇಳಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ರಾಜ್ಯ ಸರಕಾರದ ವಿರುದ್ಧ ದೂರು ನೀಡಿ 9 ತಿಂಗಳಾದರೂ ಈ ದೇಶದ “ಚೌಕೀದಾರ’ ಎನೂ ಕ್ರಮ ಜರುಗಿಸಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಇನ್ನು ರಾಜ್ಯ ಬಿಜೆಪಿ ಆಡಳಿತ ಕೇಂದ್ರ ಸರಕಾರಕ್ಕಿಂತ ಭಿನ್ನವಾಗಿಲ್ಲ. ರಾಜ್ಯದ ರೈತರು, ಕಾರ್ಮಿಕರು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯಿಂದ ಜಗಜ್ಜಾಹೀರಾಗಿದೆ ಎಂದು ಅವರು ಟೀಕಿಸಿದರು.

ಕೃಷಿ ತಜ್ಞರು ಶ್ಲಾಘಿಸಿದ್ದ ನಾವು ಜಾರಿಗೆ ತಂದ ಕೃಷಿಹೊಂಡ ಯೋಜನೆಯನ್ನು ಬೊಮ್ಮಾಯಿ ಸರಕಾರ ಸ್ಥಗಿತಗೊಳಿಸಿದೆ. ರಾಜ್ಯದಲ್ಲಿ 15 ಲಕ್ಷ ಟನ್ ರಾಗಿ ಉತ್ಪಾದಿಸಿದ್ದು, ಸರಕಾರ ಖರೀದಿಸಿರುವುದು ಕೇವಲ 1.90 ಲಕ್ಷ ಟನ್ ಮಾತ್ರ. ಇನ್ನು 14 ಟನ್ ರಾಗಿಯನ್ನು ರೈತರು ಏನು ಮಾಡಬೇಕು? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪ ಬಂಧನವಾಗಲೇಬೇಕು:

ಸಾಮಾನ್ಯರಿಗೊಂದು ಕಾನೂನು, ಉಳ್ಳವರಿಗೊಂದು ಕಾನೂನು ಇಲ್ಲ. ಕೂಡಲೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಭ್ರಷ್ಟಾಚಾರ ವಿರೋಧಿ ನಿಯಂತ್ರಣ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.

ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗೆ, ಭ್ರಷ್ಟಾಚಾರ ಮುಕ್ತ ಸರಕಾರಕ್ಕೆ ಮನುವಾದಿ ಬಿಜೆಪಿ ಸರಕಾರವನ್ನು ಕಿತ್ತೊಗೆದು ಮನುಷ್ಯತ್ವವಾದಿ ಕಾಂಗ್ರೆಸ್ ಸರಕಾರವನ್ನು ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಕ್ಕೆ ತರಬೇಕು ಎಂದು ಅವರು ಮನವಿ ಮಾಡಿದರು.ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್.ಆತ್ಮಾನಂದ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿಸುವ ಮೂಲಕ ಭ್ರಷ್ಟಾಚಾರ, ಜನವಿರೋಧಿ, ಸಂವಿಧಾನ ವಿರೋಧಿ ಸರಕಾರವನ್ನು ಅಧಿಕಾರದಿಂದ ತೆಗೆಯಲು ಮುನ್ನುಡಿ ಬರೆಯಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಮಾಜಿ ಶಾಸಕರಾದ ರಮೇಶ್‍ಬಾಬು ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ಮಧು ಮಾದೇಗೌಡ, ಬಿ.ರಾಮಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಗಣಿಗ ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

“ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದರೆ ಎಷ್ಟೇ ದುಡ್ಡು ಖರ್ಚಾದರೂ ಸರಿ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಇನ್ನೆಂದೂ ನಿಲ್ಲದಂತೆ ನಡೆಸುತ್ತೇನೆ. ಈ ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪುವವನ್ನಲ್ಲ.’

 -ಸಿದ್ದರಾಮಯ್ಯ, ವಿಪಕ್ಷ ನಾಯಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News