ಕೊಡಗು: ಇಂಧನ ಉಳಿತಾಯ ಸಂರಕ್ಷಣೆ ಕುರಿತು ಕಾಲ್ನಡಿಗೆ ಜಾಗೃತಿ ಜಾಥಾ

Update: 2022-04-18 18:05 GMT

ಮಡಿಕೇರಿ ಏ.18 : ಇಂದಿನ ಜಾಗತಿಕ ಬದಲಾವಣೆಯಿಂದ ಫಾಸಿಲ್ ಇಂಧನಗಳು ಮುಗಿದುಹೋಗುತ್ತಿರುವುದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಇಂಧನ ಕೊರತೆ ನೀಗಿಸಲು ನಾವು ಪರಿಸರ ಸ್ನೇಹಿ ಸೌರಶಕ್ತಿ ಮತ್ತಿತರ ಪರ್ಯಾಯ ಇಂಧನ ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದು ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕದ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೇಳಿದರು.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಂಗ ಸಂಸ್ಥೆಯಾದ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನ ಸಂಸ್ಥೆ (ಪಿಸಿಆರ್‍ಎ) ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ (ಐಓಸಿಎಲ್) ಬೆಂಗಳೂರು ವತಿಯಿಂದ  ಹಾಸನ ಜಿಲ್ಲೆಯ ಸೆಂಟರ್ ಫಾರ್ ಎಜುಕೇಷನ್ ಎನ್ವಿರಾನ್‍ಮೆಂಟ್ ಆಂಡ್ ಕಮ್ಯೂನಿಟಿ (ಸೀಕೋ: ) ಸಂಸ್ಥೆಯ ಆಶ್ರಯದಲ್ಲಿ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ  ಇಂಧನ ಉಳಿತಾಯ ಜನ ಜಾಗೃತಿ ಜಾಥಾ ಹಾಗೂ ಅಭಿಯಾನ ನಡೆಯಿತು.

ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ, ಶಾಲೆಯ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ, ವಿಜ್ಞಾನ ಸಂಘ ಹಾಗೂ ಎಸ್.ಡಿ.ಎಂ.ಸಿ. ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ಶಾಲೆಯ  ಸಹಯೋಗದೊಂದಿಗೆ ಕೂಡ್ಲೂರು ಗ್ರಾಮದಲ್ಲಿ ಏರ್ಪಡಿಸಿದ್ದ ಇಂಧನ ಉಳಿತಾಯದ ಕಾಲ್ನಡಿಗೆ ಜಾಗೃತಿ ಜಾಥಾ (ವಾಕಾಥಾನ್) ದಲ್ಲಿ ವಿದ್ಯಾರ್ಥಿಗಳು ಇಂಧನ ಉಳಿತಾಯ ಕುರಿತ ಭಿತ್ತಿಫಲಕಗಳನ್ನು ಹಿಡಿದು ಪ್ರಚಾರ ನಡೆಸಿದ ಸಂದರ್ಭದಲ್ಲಿ ಇಂಧನ ಉಳಿತಾಯ ಮತ್ತು ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.

ನಾವು ಉತ್ತಮ ಭವಿಷ್ಯಕ್ಕಾಗಿ ನವೀಕರಿಸಬಹುದಾದ ಪರ್ಯಾಯ ಇಂಧನ ಮೂಲಗಳಾದ ಸೌರಶಕ್ತಿ, ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಜನಸಾಮಾನ್ಯರಲ್ಲಿ ಇಂಧನ ಬಳಕೆ ಪ್ರಮಾಣದ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ನಾವು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಹತ್ತಿರದ ಸ್ಥಳಗಳಿಗೆ ವಾಹನ ಬಳಕೆ ಬದಲಿಗೆ ನಡೆದುಕೊಂಡು ಹೋಗುವುದು ಸೇರಿದಂತೆ ಪರಿಸರ ಸ್ನೇಹಿ ಬೈಸಿಕಲ್ ಬಳಕೆ ಮಾಡುವ ಮೂಲಕ ಇಂಧನ ಉಳಿಸುವುದರೊಂದಿಗೆ ಮಾಲಿನ್ಯ ತಡೆಗಟ್ಟಬೇಕಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

ಪರಿಸರ ಸ್ನೇಹಿ ಪರ್ಯಾಯ ಇಂಧನ ಮೂಲಗಳ ಬಳಕೆ ಮತ್ತು ಅವುಗಳನ್ನು ವೃದ್ಧಿಸುವ ಸಲುವಾಗಿ

ಜನಜಾಗೃತಿ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಇಂಧನ ಬಳಕೆಯಿಂದ ಜಾಗತಿಕ ತಾಪಮಾನ ಹಾಗೂ ಮಾಲಿನ್ಯ ತಡೆಗಟ್ಟುವ ಮೂಲಕ  ಸುಸ್ಥಿರ ಅಭಿವೃದ್ಧಿಗೆ ಪಣ ತೊಡಬೇಕಾಗಿದೆ ಎಂದರು.

ಭವಿಷ್ಯತ್ತಿಗಾಗಿ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವುದರೊಂದಿಗೆ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕಿದೆ ಎಂದು ಪ್ರೇಮಕುಮಾರ್ ಹೇಳಿದರು.

ಕಾಲ್ನಡಿಗೆ ಜಾಥಾದಲ್ಲಿ ವಿದ್ಯಾರ್ಥಿಗಳು ಘೋಷಣಾ ಫಲಕಗಳನ್ನು ಹಿಡಿದು ಇಂಧನ ಉಳಿತಾಯದ ಕುರಿತು ಜನಜಾಗೃತಿ ಮೂಡಿಸಿದರು. 

ನಮ್ಮ ನಡಿಗೆ ಹಸಿರೆಡೆಗೆ, ಹಸಿರು ಇಂಧನ ಬಳಸಿ ಮಾಲಿನ್ಯ ತಡೆಯಿರಿ, ಜಾಗತಿಕ ತಾಪಮಾನ ತಡೆಗಟ್ಟೋಣ ಬನ್ನಿ, ಭೂಗ್ರಹದ ರಕ್ಷಣೆಗೆ ಹಸಿರು ಇಂಧನ ಬಳಸಿ, ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರು ಇಂಧನ ಪರಿಸರ ಸ್ನೇಹಿ ಇಂಧನ, ಹಸಿರು ಇಂಧನ ಮಾಲಿನ್ಯ ರಹಿತ ಇಂಧನ, ಹಸಿರು ಇಂಧನ ಪರ್ಯಾಯ ಇಂಧನ, ಸೌರಶಕ್ತಿ ಬಳಸಿ ಭವಿಷ್ಯ ಉಳಿಸಿ ಎಂಬಿತ್ಯಾದಿ ಪರಿಸರ ಪೂರಕ ಘೋಷಣೆಗಳನ್ನು ಕೂಗುವ ಮೂಲಕ ಜನರಲ್ಲಿ ಇಂಧನ ಉಳಿತಾಯದ ಕುರಿತು ಜನಜಾಗೃತಿ ಮೂಡಿಸಲಾಯಿತು.

ಎನ್.ಎಸ್.ಎಸ್.ಅಧಿಕಾರಿ ಡಿ.ರಮೇಶ್, ಕೂಡ್ಲೂರು ಅಂಗನವಾಡಿ ಕೇಂದ್ರದ ಸಹಾಯಕಿ ತ್ರಿಪುರ ಸುಂದರಿ, ಆಶಾ ಕಾರ್ಯಕರ್ತೆ ನೇತ್ರಾವತಿ, ಸಿಬ್ಬಂದಿಗಳಾದ ಎಂ.ಉಷಾ, ಚಂದ್ರಮ್ಮ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News