VIDEO-'ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು': ಶೃಂಗೇರಿಯಲ್ಲಿ ಸಿಎಂ ಬೊಮ್ಮಾಯಿಗೆ ವ್ಯಂಗ್ಯದ ಸ್ವಾಗತ

Update: 2022-04-19 12:59 GMT

ಚಿಕ್ಕಮಗಳೂರು, ಎ.19: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಫಿನಾಡಿಗೆ ಭೇಟಿ ನೀಡಿದ್ದು, ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಜಿಲ್ಲೆಯ ಶೃಂಗೇರಿ ಪಟ್ಟಣಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ ಅವರನ್ನು ರಸ್ತೆಯುದ್ದಕ್ಕೂ ಅಣಕಿಸುವ ಬ್ಯಾನರ್ ಗಳು ಸ್ವಾಗತಿಸಿದವು.

ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ 100 ಬೆಡ್‍ಗಳ ಸುಸಜ್ಜಿತ ತಾಲೂಕು ಆಸ್ಪತ್ರೆ ನಿರ್ಮಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಈಡೇರಿಸಲು ಕಳೆದ 15 ವರ್ಷಗಳಿಂದ ಸರಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ತಾಲೂಕು ಆಸ್ಪತ್ರೆ ಹೋರಾಟ ಸಮಿತಿ ಮುಖಂಡರು ಮಂಗಳವಾರ ಸಿಎಂ ಭೇಟಿ ಹಿನ್ನೆಲೆಯಲ್ಲಿ ರಸ್ತೆಯ ಅಲ್ಲಲ್ಲಿ ಸಿಎಂ ಅವರನ್ನು ಅಣಕಿಸುವ ಬ್ಯಾನರ್ ಗಳನ್ನು ಕಟ್ಟಿ ಮುಜುಗರವನ್ನುಂಟು ಮಾಡಿದರು. 

"ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಶೃಂಗೇರಿ ಪಟ್ಟಣ ಸುಸಜ್ಜಿತ ಆಸ್ಪತ್ರೆ ಇಲ್ಲದ ಊರಾಗಿದೆ. ವಾಹನದಲ್ಲಿ ತೆರಳು ಸಂದರ್ಭ ಏನಾದರು ಹೆಚ್ಚು ಕಮ್ಮಿಯಾದರೇ ಈ ಊರಿನಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ, ನೂರು ಕಿಮೀ ದೂರದ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾಗಿರುವುದರಿಂದ ವಾಹನದಲ್ಲಿ ನಿಧಾನವಾಗಿ ಚಲಿಸಿ. 100 ಬೆಡ್‍ಗಳ ಆಸ್ಪತ್ರೆ ನಿರ್ಮಾಣದ ಕಡತಗಳು ಕಳೆದ 15 ವರ್ಷಗಳಿಂದ ಸರಕಾರಿ ಕಚೇರಿಯಲ್ಲಿ ಕೊಳೆಯುತ್ತಿದೆ" ಎಂದು ಸಿಎಂ ಅವರನ್ನು ಅಣಕಿಸಿ ಬರೆದ ಬ್ಯಾನರ್ ಗಳನ್ನು ಹೋರಾಟ ಸಮಿತಿಯವರು ಮುಖ್ಯಮಂತ್ರಿ ಬೊಮ್ಮಾಯಿ ಅವರು ಶೃಂಗೇರಿ ಪಟ್ಟಣದಲ್ಲಿ ಹಾದು ಹೋಗುವ ರಸ್ತೆ ಬದಿಗಳಲ್ಲಿ ಕಟ್ಟಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಬಗ್ಗೆ ಗಮನ ಸೆಳೆದರು.

ಹೆಲಿಕಾಪ್ಟರ್ ಮೂಲಕ ಸಿಎಂ ಬೊಮ್ಮಾಯಿ ಅವರು ಶೃಂಗೇರಿ ಪಟ್ಟಣಕ್ಕೆ ಆಗಮಿಸಿದ್ದು, ಹೆಲಿಪ್ಯಾಡ್‍ನಿಂದ ಕಾರಿನಲ್ಲಿ ಶೃಂಗೇರಿ ದೇವಾಲಯ ಹಾಗೂ ಮಠಕ್ಕೆ ಭೇಟಿ ನೀಡಿ ಹಿಂದಿರುವ ವೇಳೆ ಹೆಲಿಪ್ಯಾಡ್‍ನಲ್ಲಿ ಜಮಾಯಿಸಿದ್ದ ಆಸ್ಪತ್ರೆ ಹೋರಾಟ ಸಮಿತಿ ಮುಖಂಡರು, ಮತ್ತೆ ಬ್ಯಾನರ್ ಪ್ರದರ್ಶಿಸಿ ಶೀಘ್ರ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮವಹಿಸಬೇಕೆಂದು ಘೋಷಣೆ ಕೂಗಿದರು. ಈ ವೇಳೆ ಸಮಿತಿ ಮುಖಂಡರಿದ್ದಲ್ಲಿಗೆ ಬಂದ ಸಿಎಂ ಮುಖಂಡರ ಅಹವಾಲು ಕೇಳಿ ಮನವಿ ಪತ್ರವನ್ನು ಸ್ವೀಕರಿಸಿದರು. ಶೃಂಗೇರಿ ಪಟ್ಟಣದಲ್ಲಿ 100 ಬೆಡ್‍ಗಳ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದ್ದು, ಈ ಸಂಬಂಧ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಶೀಘ್ರ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಈ ವೇಳೆ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News