ಕಳಸ: ಕುದುರೆಮುಖ ಕಂಪೆನಿ ದಿನಗೂಲಿ ನಿರಾಶ್ರಿತರಿಗೆ ನಿವೇಶನ ಕಲ್ಪಿಸಲು ಆಗ್ರಹಿಸಿ ಧರಣಿ

Update: 2022-04-19 13:28 GMT

ಕಳಸ , ಎ.19: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿಯ ಸ್ಥಗಿತದಿಂದ ನಿರಾಶ್ರಿತರಾಗಿರುವ ದಿನಗೂಲಿ ಕಾರ್ಮಿಕರಿಗೆ ನಿವೇಶನ ಹಾಗೂ ಆಶ್ರಯ ಮನೆ ಕಲ್ಪಿಸಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಷ್ಟ್ ಪಕ್ಷದ ನೇತೃತ್ವದಲ್ಲಿ ಸೋಮವಾರ ಕಳಸ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಆರಂಭಿಸಲಾಗಿರುವ ನಿರಾಶ್ರಿತರ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ನಾಡಕಚೇರಿ ಆವರಣದಲ್ಲಿ ಗಂಜಿ ಕೇಂದ್ರ ತೆರೆದು ನಿರಾಶ್ರಿತರು ಧರಣಿ ಮುಂದುವರಿಸಿ, ಬೇಡಿಕೆ ಈಡೇರದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಸೋಮವಾರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯೂನಿಷ್ಟ್ ಪಕ್ಷದ ಮುಖಂಡರಾದ ಲಕ್ಷ್ಮಣ್ ಆಚಾರ್, ಗೋಪಾಲ್ ಶೆಟ್ಟಿ, ರಮೇಶ್ ಕೆಳಗೂರು ಹಾಗೂ ನಿರಾಶ್ರಿತರ ಪುನರ್ವಸತಿ ಹೋರಾಟ ಸಮಿತಿಯ ಅಣ್ಣಪ್ಪ, ನಾಗೇಂದ್ರ, ಸೀನ ಬಾರಿಗ ನೇತೃತ್ವದಲ್ಲಿ ಕಳಸ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಿರಾಶ್ರಿತರು ಬಳಿಕ ಪಟ್ಟಣದಲ್ಲಿರುವ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು. ಈ ವೇಳೆ ನಿರಾಶ್ರಿತರಿಗೆ ನಿವೇಶನ ಕಲ್ಪಿಸಲು ಮಂಜೂರಾಗಿರುವ ಜಾಗದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. 

ಈ ವೇಳೆ ಕಳಸ ತಾಲೂಕು ಕಚೇರಿ ಅಧಿಕಾರಿಗಳು ಧರಣಿ ನಿರತರನ್ನು ಭೇಟಿಯಾಗಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಧರಣಿ ನಿರತರು ನಿರಾಶ್ರಿತರಿಗೆ ನಿವೇಶನಕ್ಕಾಗಿ ಮಂಜೂರಾಗಿರುವ ಜಾಗದಲ್ಲಿ ಕೂಡಲೇ ಮನೆಗಳ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲಿಯವರೆಗೂ ಧರಣಿ ಕೈಬಿಡಲ್ಲ ಎಂದು ಪಟ್ಟು ಹಿಡಿದು ಸೋಮವಾರ ಇಡೀ ದಿನ ಧರಣಿ ನಡೆಸಿದರು. ನಿರಾಶ್ರಿತರ ಧರಣಿ ಮಂಗಳವಾರವೂ ಮುಂದುವರಿದಿದ್ದು, ಧರಣಿ ನಿರತರು ಸ್ಥಳದಲ್ಲೇ ಗಂಜಿ ಕೇಂದ್ರ ತೆರೆಯುವ ಮೂಲಕ ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡಲ್ಲ ಎಂಬ ಸಂದೇಶವನ್ನು ಜಿಲ್ಲಾಡಳಿತಕ್ಕೆ ರವಾನಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿ 2005ರಲ್ಲಿ ಸ್ಥಗಿತಗೊಂಡಿದ್ದು, ಇದರಿಂದ ಕಂಪೆನಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಕುದುರೆಮುಖದ ವಿನೋಬ ನಗರದ ನಿವಾಸಿಗಳು ಯಾವುದೇ ಪರಿಹಾರ, ಪುನರ್ವಸತಿ ಇಲ್ಲದೇ ಅಕ್ಷರಶಃ ಬೀದಿಪಾಲಾಗಿದ್ದಾರೆ. ವಿನೋಬ ನಗರ ಕಾಲನಿಯಲ್ಲಿ ಕಳೆದ 17 ವರ್ಷಗಳಿಂದ ಯಾವುದೇ ಮೂಲಸೌಕರ್ಯಗಳಿಲ್ಲದೇ ಕಾರ್ಮಿಕರು ಬದುಕುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಮಿಕರ ಧಯನೀಯ ಸ್ಥಿತಿಯನ್ನು ಕಂಡೂ ಕಾಣದಂತಿದ್ದಾರೆ. ಬಡವರ ಸಂಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಕಾರ್ಮಿಕರು ಸಿಪಿಐ ಪಕ್ಷದ ನೇತೃತ್ವದಲ್ಲಿ ಕುದುರೆಮುಖ ದಿನಗೂಲಿ ನಿರಾಶ್ರಿತರು ಪರಿಹಾರ, ಪುನರ್ವಸತಿಗಾಗಿ 2005ರಲ್ಲಿ ಹೋರಾಟ ನಡೆಸಿದ ಪರಿಣಾಮ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಹಾಗೂ ಎಸ್ಪಿ ಮಧುಕರಶೆಟ್ಟಿ ಅವರ ಪರಿಶ್ರಮದಿಂದಾಗಿಈ ನಿರಾಶ್ರಿತರಿಗೆ ನಿವೇಶನ ಕಲ್ಪಿಸಲು ಕಳಸ ಪಟ್ಟಣದ ಸ.ನಂ.85ರಲ್ಲಿ 10 ಎಕರೆ ಜಾಗ ಮಂಜೂರು ಮಾಡಿದ್ದಲ್ಲದೇ ರಾಜೀವ್ ಗಾಂಧಿ ವಸತಿ ನಿಗಮದಿಂದ ಆಶ್ರಯ ಮನೆಗಳನ್ನೂ ಮಂಜೂರು ಮಾಡಲಾಗಿತ್ತು. ಆದರೆ ಈ ಅಧಿಕಾರಿಗಳ ವರ್ಗಾವಣೆ ಬಳಿಕ ನಿರಾಶ್ರಿತರಿಗೆ ನಿವೇಶನ, ಮನೆ ನೀಡುವ ಯೋಜನೆ ನೆನೆಗುದಿಗೆ ಬಿದ್ದಿದೆ. ಕಳೆದ ಎರಡು ವರ್ಷಗಳ ಹಿಂದೆ ನಿರಾಶ್ರಿತರು ಮತ್ತೆ ಹೋರಾಟ ನಡೆಸಿದ ಪರಿಣಾಮ ಅಂದಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ನಿರಾಶ್ರಿತರಿಗೆ ನಿವೇಶನ ಕಲ್ಪಿಸಲು 5 ಎಕರೆ ಜಾಗ ಮಂಜೂರು ಮಾಡಿ, ಮನೆಗಳ ನಿರ್ಮಾಣಕ್ಕೂ ಪ್ರಸ್ತಾವ ಸಲ್ಲಿಸಿದ್ದರಿಂದ ಮನೆ ನಿರ್ಮಾಣಕ್ಕೆ ಅನುದಾನವೂ ಬಿಡುಗಡೆಯಾಗಿದೆ. ಆದರೆ ಹಿಂದಿನ ಮಾರುಕಟ್ಟೆ ದರದಂತೆ ಅನುದಾನ ನೀಡಿರುವುದರಿಂದ ಮನೆಗಳ ನಿರ್ಮಾಣ ಕಾರ್ಯ ಮತ್ತೆ ನೆನೆಗುದಿಗೆ ಬಿದ್ದಿದ್ದು, ಈ ಸಂಬಂಧ ಕ್ಷೇತ್ರದ ಶಾಸಕರಾಗಲೀ, ಕಂದಾಯ, ಜಿಪಂ ಇಲಾಖೆ ಅಧಿಕಾರಿಗಳಾಗಲೀ ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು.

ಸದ್ಯ ಮಳೆಗಾಲ ಆರಂಭವಾಗುತ್ತಿದ್ದು, ನಿರಾಶ್ರಿತ ಕಾರ್ಮಿಕ ಕುಟುಂಬಗಳು ಕುದುರೆಮುಖದ ವಿನೋಬ ನಗರದ ಕಾಲನಿಯಲ್ಲಿರುವ ಗುಡಿಸಲುಗಳಲ್ಲಿ ವಾಸಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೇ ಕಾಲನಿ ಕಾಡಂಚಿನಲ್ಲಿರುವುದರಿಂದ ಕಾಡು ಪ್ರಾಣಿಗಳ ಕಾಟವೂ ಹೆಚ್ಚಾಗಿದೆ. ಇದರಿಂದ ನಿರಾಶ್ರಿತರು ಬಾಡಿಗೆ ಮನೆಗಳಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜಿಲ್ಲಾಡಳಿತ ಕುದುರೆಮುಖ ನಿರಾಶ್ರಿತರಿಗೆ ಮಂಜೂರು ಮಾಡಿರುವ ಜಾಗದಲ್ಲಿ ಆಶ್ರಯಮನೆಗಳ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲಿಯವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News