×
Ad

ಬಿಎಸ್‍ವೈ ಪರ ಮಾತನಾಡಿದ್ದಕ್ಕೆ ಎಷ್ಟು ಕಮಿಷನ್ ನೀಡಿದ್ದಾರೆ: ದಿಂಗಾಲೇಶ್ವರ ಶ್ರೀಗಳಿಗೆ ಶಾಸಕ ಯತ್ನಾಳ್ ಪ್ರಶ್ನೆ

Update: 2022-04-19 19:55 IST

ವಿಜಯಪುರ, ಎ.19: ಮಠಗಳಿಗೆ ಅನುದಾನ ನೀಡಲು ಶೇ.30ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ದಿಂಗಾಲೇಶ್ವರ ಶ್ರೀಗಳು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಶ್ರೀಗಳು ಯಾರಿಗೆ ಕೊಟ್ಟರು? ಎಲ್ಲಿ ಕೊಟ್ಟರು? ಇದಕ್ಕೆ ಸಾಕ್ಷಿ ಏನು ಎಂದು ಕೇಳಿದ್ದಾರೆ. ಜತೆಗೆ ಶ್ರೀಗಳಿಗೆ ಬಿಎಸ್‍ವೈ ಪರ ಮಾತನಾಡಿದ್ದಕ್ಕೆ ವಿಜಯೇಂದ್ರ ಎಷ್ಟು ಕಮಿಷನ್ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

ಮಂಗಳವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಬಗ್ಗೆ ಒಳ್ಳೆಯದನ್ನೂ ಬಯಸುವ ಸ್ವಾಮೀಜಿಗಳು ಸಾಕ್ಷಿ ಸಮೇತ ಮಾತನಾಡಬೇಕು. ಸತ್ಯ, ಧರ್ಮ, ನ್ಯಾಯ-ನೀತಿ ಬಗ್ಗೆ ಪ್ರವಚನ ಮಾಡುತ್ತಾರೆ. ಮೊದಲು ಶೇ. 30ರಷ್ಟು ಯಾರಿಗೆ ಕೊಟ್ಟಿದ್ದಾರೆ, ಅದನ್ನು ನೀವ್ಯಾಕೆ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಮಠದಲ್ಲಿ ಕುಳಿತು ಒಳ್ಳೆಯ ವಿಚಾರ ಹೇಳುವುದು ಬಿಟ್ಟು ವಿಜಯೇಂದ್ರನಿಂದ ಹಣ ತೆಗೆದುಕೊಂಡು, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಹೇಳಿದ್ದೀರಿ. ಆಗ ವಿಜಯೇಂದ್ರ ಎಷ್ಟು ಕಮಿಷನ್ ಕೊಟ್ಟಿದ್ದರು ಎಂದು ಪ್ರಶ್ನಿಸಿದರು.

ಈ ಕುರಿತಂತೆ ಶ್ರೀಗಳು ಉತ್ತರ ನೀಡಬೇಕು. ಸುಮ್ಮನೆ ಕಾವಿ ಹಾಕಿಕೊಂಡರೆ, ನಾವು ಗೌರವ ಕೊಡುತ್ತೇವೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಡಿಕೆಶಿ ಮನೆಗೆ ಹೋಗಿ ಮುಂದಿನ ಸಿಎಂ ನೀವೇ ಎಂದು ಆಶೀರ್ವಾದ ಮಾಡುತ್ತೀರಿ? ಅವರಿಗೆ ಸೂರ್ಯ, ಚಂದ್ರ ಎಂದಲ್ಲ ಹೇಳುತ್ತೀರಿ? ಅದರ ಬದಲು ಮಠದಲ್ಲಿ ಕುಳಿತು ಒಳ್ಳೆಯ ಕೆಲಸ ಮಾಡಲಿ ಎಂದರು.

ಪಿಎಸ್‍ಐ ಹುದ್ದೆ ಅಕ್ರಮ: 545 ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗ್ಗೆ ಸರಕಾರ ಸಿಐಡಿ ತನಿಖೆ ನಡೆಸುತ್ತಿದೆ. ಪ್ರಧಾನಿ ಹೇಳಿದಂತೆ ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮಕೈಗೊಳ್ಳಲಾಗುತ್ತದೆ. ಇದರಲ್ಲಿ ಪಕ್ಷಭೇದವಿಲ್ಲ ಎಂದು ಶಾಸಕ ಯತ್ನಾಳ್ ಹೇಳಿದರು. ಇದರಲ್ಲಿ ಬಿಜೆಪಿಯವರು ಇದ್ದರೂ ಅವರ ಮೇಲೆ ತನಿಖೆ ನಡೆಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News