×
Ad

'ಬನ್ನಿ ಜನರ ಬಳಿ ಹೋಗೋಣ ನಿಮ್ಮ ಭ್ರಷ್ಟಾಚಾರದ ಕಥೆ ಹೇಳುತ್ತೇವೆ': ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ತಿರುಗೇಟು

Update: 2022-04-19 21:46 IST

ಶಿವಮೊಗ್ಗ, ಏ.19; 'ಕರ್ನಾಟಕದಲ್ಲಿ ಭಾರಿ ಸಾಧನೆ ಮಾಡುತ್ತೇವೆ ಎಂದು ಸತ್ಯಹರಿಶ್ಚಂದ್ರನ ವಂಶಾವಳಿಗಳಂತೆ ಕಾಂಗ್ರೆಸ್ಸಿಗರು ಹೊರಟಿದ್ದಾರೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.

ಇಲ್ಲಿನ ಪ್ರೇರಣಾ ಸಭಾಂಗಣದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 

ಕಾಂಗ್ರೆಸ್ ಕಾಲದಲ್ಲಿ ಕುಡಿಯುವ ನೀರು, ಮನೆ ನಿರ್ಮಾಣ, ಎಸ್ ಸಿ ಎಸ್ ಟಿ ಹಾಸ್ಟೆಲ್ ನ ದಿಂಬು ಹಾಸಿಗೆ, ಹೀಗೆ ಎಲ್ಲದರಲ್ಲೂ ಭ್ರಷ್ಟಾಚಾರ ಮಾಡಿದರು. ಭ್ರಷ್ಟಾಚಾರದ ಕೂಪ ಕಾಂಗ್ರೆಸ್. ಬನ್ನಿ ಜನರ ಬಳಿ ಹೋಗೋಣ ನಿಮ್ಮ ಭ್ರಷ್ಟಾಚಾರದ ಕಥೆ ಹೇಳುತ್ತೇವೆ. ಇವರು ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಿದೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

ಗರೀಬಿ ಹಠಾವೋ ಎನ್ನುವ ಕಾಲ ಈಗ ಹೋಗಿದೆ. 2023ರಲ್ಲಿ ಜನರಿಗೋಸ್ಕರ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಎಲ್ಲರೂ ಸಂಕಲ್ಪ ಮಾಡಬೇಕು  ಎಂದು ಸಿಎಂ ಕಾರ್ಯಕರ್ತರಿಗೆ ಕರೆ ನೀಡಿದರು.

ಸಿದ್ದರಾಮಯ್ಯ ಹಾಗೂ ಡಿಕೆಶಿ ಮುಖ ಒಂದೊಂದು ದಿಕ್ಕಿಗಿದೆ. ಹಿಜಾಬ್ ಸಮಸ್ಯೆಯನ್ನು ಪಿಎಫ್ ಐ ಹುಟ್ಟುಹಾಕಿತು. ಇದನ್ನು ತಪ್ಪು ಎನ್ನುವ ತಾಕತ್ತು ಕಾಂಗ್ರೆಸ್ಸಿಗರಿಗಿಲ್ಲ. ದೇಶವಿಭಜನೆ ಮಾಡುವವರಿಗೆ ಪುಷ್ಟಿ ನೀಡುವ ಕೆಲಸ ಕಾಂಗ್ರೆಸ್ಸಿಗರು ಮಾಡುತ್ತಾರೆ. ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ಆದೇಶ ಮಾಡಿದರೂ ಹೈಕೋರ್ಟ್ ಆದೇಶ ಪಾಲನೆ ಮಾಡಿ ಎಂಬ ಒಂದೇ ಮಾತು ಕಾಂಗ್ರೆಸ್ಸಿಗರ ಬಾಯಲ್ಲಿ ಬರಲಿಲ್ಲ. ಡಿಜೆ ಹಳ್ಳಿ, ಕೆಜಿಹಳ್ಳಿಯಲ್ಲಿ ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಇಟ್ಟಾಗ ಬೆಂಕಿ ಇಟ್ಟವರ ಪರವಾಗಿ ಮಾತನಾಡಿದರು. ನಿಮ್ಮ ಶಾಸಕನ ಬಗ್ಗೆ ಮಾತನಾಡದವರಿಗೆ ಯಾವ ತಾಕತ್ತಿದೆ. ಹಿಂದು ಕಾರ್ಯಕರ್ತರ ಕೊಲೆ ಮಾಡಿದವರ ಕೇಸ್ ಕಾಂಗ್ರೆಸ್ ನವರು ವಾಪಸ್ ಪಡೆದವರು. ಹುಬ್ಬಳ್ಳಿ ಘಟನೆ ತಪ್ಪು ಎನ್ನುವ ಕೆಲಸ ಕಾಂಗ್ರೆಸ್ ಮಾಡಲಿಲ್ಲ ಎಂದು ಟೀಕಿಸಿದರು.

ಬಿಎಸ್‌ವೈ ತಾಳ್ಮೆಯೇ ಕಾರಣ: ಶಿಸ್ತೇ ನಮ್ಮ ಪಕ್ಷದ ಗುಣಧರ್ಮ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷದ ಕಷ್ಟದ ದಿನಗಳಲ್ಲಿ ಪಕ್ಷ ಕಟ್ಟಿ ಬೆಳೆಸಲಾಗಿದೆ. ಯಡಿಯೂರಪ್ಪ ಅವರಿಗೆ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿರಲಿಲ್ಲ. ಆದರೆ ಜನರಿಗೆ ಒಳ್ಳೆಯದಾಗಲಿ ಎಂದು ಹೋರಾಟ ನಡೆಸುತಿದ್ದರು. ಯಡಿಯೂರಪ್ಪ ಹೋರಾಟ ನೋಡಿ ಅಂದಿನ ಶಕ್ತಿ ಶಾಲಿ ಕಾಂಗ್ರೆಸ್ ನಡುಗಲು ಆರಂಭವಾಯಿತು. ಹೀಗಾಗಿ ಯಡಿಯೂರಪ್ಪ ಅವರ ಮೇಲೆ ದೈಹಿಕ ಹಲ್ಲೆ ನಡೆಯಿತು. ಆಗ ಯಡಿಯೂರಪ್ಪ ಅವರು ಪುಟಿದೆದ್ದರು. ಅಂದು ಯಡಿಯೂರಪ್ಪ ಅವರು ಪುಟಿದೇಳದಿದ್ದರೆ ಇಂದು ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಜೊತೆಗೆ ನಾವುಗಳು ಸಿಎಂ ಆಗುತ್ತಿರಲಿಲ್ಲ. ಇದಕ್ಕೆಲ್ಲ ಕಾರಣ ಯಡಿಯೂರಪ್ಪ ಅವರ ಹೋರಾಟ ಹಾಗೂ ತಾಳ್ಮೆಯೇ ಕಾರಣ. ಇದು ಒಬ್ಬ ನಾಯಕನಿಗೆ ಬೇಕಾಗಿರುವ ಪ್ರಮುಖ ಗುಣ.  

ಈಗಿರುವುದು ಪೊಳ್ಳು ಕಾಂಗ್ರೆಸ್

ಹಿಂದೆ ರಾಜ್ಯದಲ್ಲಿ ಶಕ್ತಿಶಾಲಿ ಕಾಂಗ್ರೆಸ್ ಇತ್ತು. ಆದರೆ ಇಂದು ರಾಜ್ಯದಲ್ಲಿರುವುದು ಪೊಳ್ಳು ಕಾಂಗ್ರೆಸ್. ಒಂದು ಪಕ್ಷಕ್ಕೆ ಸಿದ್ಧಾಂತ, ನಾಯಕ, ಕಾರ್ಯಕರ್ತರ ಪಡೆ ಇದ್ದರೆ ಅದು ಬಿಜೆಪಿಗೆ ಮಾತ್ರ. ಇದ್ಯಾವುದೂ ಇಲ್ಲದ ಕಾಂಗ್ರೆಸ್ ದೇಶವನ್ನೇ ಗೆಲ್ಲಲು ಹೊರಟಿದೆ ಎಂದು ಲೇವಡಿ ಮಾಡಿದ ಸಿಎಂ. ಪಂಚರಾಜ್ಯ ಚುನಾವಣೆಯಲ್ಲಿ ನಾವು ಕಮಾಲ್ ಮಾಡುತ್ತೇವೆ ಎಂದರು. ಇದ್ದ ಒಂದು ರಾಜ್ಯವನ್ನು ಕಳೆದುಕೊಂಡಿದ್ದಾರೆ. ಬಿಜೆಪಿ ನಾಲ್ಕು ರಾಜ್ಯಗಳನ್ನು ವಾಪಾಸ್ ಪಡೆದಿದೆ ಅದೇ ನಮ್ಮ ಶಕ್ತಿ ಎಂದರು.
 
ನಮಗೆ ಸಿಕ್ಕಿರುವ ಮೂರು ವರ್ಷದಲ್ಲಿ ಅದರಲ್ಲೂ ಕೋವಿಡ್ ಸಂದರ್ಭದಲ್ಲಿಯೂ ರಾಜ್ಯದ ಅಭಿವೃದ್ಧಿ ಮುಂದುವರಿಸಿದ್ದೇವೆ ಯಡಿಯೂರಪ್ಪ ನೇತೃತ್ವದಲ್ಲಿ. ದಾಖಲೆ ಪ್ರಮಾಣದ ವ್ಯಾಕ್ಸಿನೇಷನ್ ಭಾರತದಲ್ಲಿ ಆಗಿರುವುದಕ್ಕೆ ಕಾರಣ ನರೇಂದ್ರಮೋದಿ ಅವರು. ಹಿಂದೆ ಪ್ಲೇಗ್ ಬಂದಾಗ ಜನ ಸಾಂಕ್ರಾಮಿಕ ರೋಗದಿಂದಲೂ ಹೆಚ್ಚು ಜನ ಸತ್ತಿದ್ದು ಹಸಿವಿನಿಂದ. ಆಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಕರೋನಾ ಬಂದಾಗ ಜನರಿಗೆ ಚಿಕಿತ್ಸೆ ಜೊತೆಗೆ ಆಹಾರವನ್ನೂ ನೀಡಲಾಯಿತು. ಇದು ಬಿಜೆಪಿ. ನಾವೆಲ್ಲಾ ಹೆಮ್ಮೆಪಡುವ ನಾಯಕತ್ವ ನಮ್ಮಲ್ಲಿ ಇದೆ. ಕರ್ನಾಟಕವನ್ನು ಸುಭೀಕ್ಷವಾಗಿ ಕಟ್ಟಲು ಇಲ್ಲಿ ಬಿಜೆಪಿಯನ್ನು ಇನ್ನಷ್ಟು ಸದೃಢವಾಗಿ ಕಟ್ಟಬೇಕು. ಬೇರೆ ಯಾವ ಪಕ್ಷಗಳಿಗೂ ಈ ಜವಾಬ್ದಾರಿ ಹೊತ್ತುಕೊಳ್ಳುವ ತಾಕತ್ತಿಲ್ಲ. ಆರ್ಥಿಕ ಹಿಂಜರಿತದ ಕಾಲದಲ್ಲೂ 15 ಸಾವಿರ ಕೋಟಿ ಲಾಭವನ್ನು ರಾಜ್ಯದ ಬೊಕ್ಕಸಕ್ಕೆ ತಂದಿದ್ದೆವೆ. ಇದು ದಾಖಲೆ. ಇದರಿಂದಾಗಿ ಹಲವು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಇದೇ ವೇಳೆಗೆ ಕೇಂದ್ರಸರ್ಕಾರ ನಮಗೆ 9 ಸಾವಿರ ಕೋಟಿ ಅನುದಾನ ನೀಡಿದೆ. ದೇಶ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ದೇಶ ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರಬೇಕಾಗಿದೆ ಎಂದರು.

ಭೂಮಿ ಸಮಸ್ಯೆಗೆ ಮುಕ್ತಿ

ಶಿವಮೊಗ್ಗ ಪ್ರಗತಿಪರರು, ನಾಯಕರು, ಹೋರಾಟಗಾರರಿಂದ ಕೂಡಿದ್ದು.  ರಾಜ್ಯದಲ್ಲಿ ಭವಿಷ್ಯದಲ್ಲಿ ಅಭಿವೃದ್ಧಿಯಾಗುವ ಜಿಲ್ಲೆಯಾವುದಾದರೂ ಇದ್ದಲ್ಲಿ ಅದು ಶಿವಮೊಗ್ಗ ಮಾತ್ರ. ಬೆಂಗಳೂರು ಹೊರತುಪಡಿಸಿ ಐಟಿ ಬಿಟಿ ಮಾಡುವ ಅವಕಾಶವಿರುವುದು ಶಿವಮೊಗ್ಗಕ್ಕೆ ಮಾತ್ರ. ಮುಂಬರುವ ಡಿಸೆಂಬರ್ ಒಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಆರಂಭಿಸುತ್ತೇವೆ. ಶಿವಮೊಗ್ಗದಲ್ಲಿ ಟೂರಿಸಂಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಬಗರ್ ಹುಕುಂ ಸಮಸ್ಯೆಗೆ ಮುಕ್ತಿ ಹಾಡುವ ಕೆಲಸ ನಾವು ಮಾಡುತ್ತೇವೆ. ಈ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದೇವೆ. ಶರಾವತಿ, ಚಕ್ರ ಸಂತ್ರಸ್ಥರ ಸಮಸ್ಯೆಗಳಿಗೆ ಶೀಘ್ರವೇ ಮುಕ್ತಿಕೊಡುವ ಕೆಲಸ ಮಾಡುತ್ತೇವೆ. ಜನಸ್ಪಂದನೆಯ ಸರ್ಕಾರ ನಮ್ಮ ಸರ್ಕಾರ ಆಗಬೇಕು. ಅದಕ್ಕಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ.  ರಾಜ್ಯದಲ್ಲಿ ಏಳು ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಲೆವೆಲ್ ಗೆ ಮಾಡುತಿದ್ದೇವೆ ಎಂದು ಭರವಸೆ ನೀಡಿದರು.

ರಾಹುಲ್ ಗಾಂಧಿ ಬಂದರೆ ಸಂತಸ

ರಾಹುಲ್ ಗಾಂಧಿ ಬಂದು ಹೋಗಿದ್ದು ನಮಗೆ ಸಂತಸ ತಂದಿದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೋ ಅಲ್ಲಿ ಕಾಂಗ್ರೆಸ್ ನಾಶವಾಗಿದೆ. ರಾಹುಲ್ ಗಾಂಧಿ ಇನ್ನೆಷ್ಟು ಬಾರಿ ರಾಜ್ಯಕ್ಕೆ ಬಂದರೂ  ಸ್ವಾಗತಿಸುತ್ತೇನೆ ಎಂದು ಸಿಎಂ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News