ನಂಜನಗೂಡು ನಗರಸಭೆಯಲ್ಲಿ ಭ್ರಷ್ಟ ಅಧಿಕಾರಿಗಳಿಂದ ಸಾರ್ವಜನಿಕರ ಸುಲಿಗೆ: ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಆರೋಪ

Update: 2022-04-19 17:58 GMT

ನಂಜನಗೂಡು: ನಂಜನಗೂಡು ನಗರಸಭೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಅಧಿಕಾರಿಗಳು ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರಸಭಾ ಕಚೇರಿ ಮುಂಭಾಗ  ಮಂಗಳವಾರ  ಮಾಜಿ ಶಾಸಕ ಕಳಲೆ  ಕೇಶವಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರುಗಳು ಮತ್ತು ಕಾಂಗ್ರೆಸ್ ಮುಖಂಡರುಗಳು ಪ್ರತಿಭಟನೆ ನಡೆಸಿ ನಗರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಕುಡಿಯುವ ನೀರಿನ ಬಿಲ್ ಪಾವತಿಯನ್ನು ಮೂರರಷ್ಟು ಹೆಚ್ಚಳ ಮಾಡಿದ್ದು ಪಟ್ಟಣದ ಪ್ರತಿ ಬಡಾವಣೆಗಳಲ್ಲಿ ಕುಡಿಯುವ ನೀರಿನ ದರ ತುಂಬ ದುಬಾರಿಯಾಗಿದೆ ಕಳೆದ ವರ್ಷ ಆಶ್ರಯಸಮಿತಿ ವತಿಯಿಂದ ನೀಡಲಾದ ನಿವೇಶನ ಹಂಚಿಕೆಯಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು ಸಾರ್ವಜನಿಕರು ನಗರಸಭೆ ಕಾರ್ಯಾಲಯಕ್ಕೆ ಕಾಲಿಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭಾ ಕಚೇರಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ತುಂಬಿರುವುದರಿಂದ ಪ್ರತಿ ಕೆಲಸ ಕಾರ್ಯಗಳಿಗೆ ಇಂತಿಷ್ಟು ಹಣ ಅಂತ ಫಿಕ್ಸ್ ಮಾಡಲಾಗಿದೆ. ಆದರೆ ಬೋರ್ಡ್ ಮಾತ್ರ ಹಾಕಿಲ್ಲ ಖಾತೆ ಬದಲಾವಣೆ ಸೇರಿದಂತೆ ಇತರೆ ಯಾವುದೆ ಕೆಲಸಗಳಿಗೆ ಸಾರ್ವಜನಿಕರು ಬಂದರೆ ಅಧಿಕಾರಿಗಳು  ಸಲಿಗೆ ಮಾಡಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ನಗರನಿವಾಸಿಗಳು ತಮ್ಮಸಂತಮನೆ ಖಾತೆ ಬದಲಾವಣೆಗೆ ಹರಸಾಹಸ ಪಡುವಂತಾಗಿದ್ದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತೆಯಿಂದಾಗಿ ಇಂದು ನಗರ ಸಭೆಗೆ ತುಂಬ ಕೆಟ್ಟ ಹೆಸರು ಬಂದಿದೆ ಎಂದು ಕಿಡಿಕಾರಿದರು. ನಂತರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಕುರಹಟ್ಟಿ ಮಹೇಶ್, ನಗರಸಭಾ ಸದಸ್ಯರಾದ ಸ್ವಾಮಿ, ಎಸ್.ಪಿ.ಮಹೇಶ್, ಗಂಗಾಧರ್, ಗಾಯತ್ರಿ, ಎನ್.ಎಸ್.ಯೋಗೇಶ್, ನಾಗೇಶರಾಜು ಮಾರುತಿ ನಾಗರತ್ನಮ್ಮ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ಹುಂಡಿ ನಾಗರಾಜು  ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News