ಅಭಿವೃದ್ಧಿಯ ಹೆಸರಿನಲ್ಲಿ ಆಧುನಿಕ ಜೀತ

Update: 2022-04-20 03:41 GMT

ಮ್ಯಾನ್‌ಹೋಲ್ ಸ್ವಚ್ಛಗೊಳಿಸುವುದಕ್ಕೆ ಕಾರ್ಮಿಕರನ್ನು ಬಳಸಬಾರದು ಎನ್ನುವ ನಿಯಮವಿದ್ದರೂ ಅಲ್ಲಲ್ಲಿ ಕಾರ್ಮಿಕರನ್ನು ಬಳಸಿ ಅವರ ಸಾವಿಗೆ ಕಾರಣವಾಗುತ್ತಿರುವ ಪ್ರಕರಣಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಮಲದ ಗುಂಡಿ, ತ್ಯಾಜ್ಯ ಗುಂಡಿ ಅಥವಾ ಮ್ಯಾನ್‌ಹೋಲ್‌ಗಳಲ್ಲಿ ಮನುಷ್ಯನೊಬ್ಬನ ಸಾವು, ನಮ್ಮ ಸಮಾಜದಲ್ಲಿ ಮನುಷ್ಯ ಘನತೆಯೆನ್ನುವುದು ಅದೆಷ್ಟು ಅಗ್ಗವಾಗಿದೆ ಎನ್ನುವುದನ್ನು ಹೇಳುತ್ತದೆ. ಮ್ಯಾನ್‌ಹೋಲ್, ತ್ಯಾಜ್ಯಗುಂಡಿಗಳಲ್ಲಿ ಇರುವ ವಿಷಾನಿಲಗಳು ಸಾವಿಗೆ ಕಾರಣವಾಗಬಹುದು ಎನ್ನುವುದನ್ನು ಈಗಾಗಲೇ ಹಲವು ದುರಂತಗಳು ನಮಗೆ ಹೇಳಿವೆ. ಆದರೂ ನಾವು ಪಾಠ ಕಲಿತಿಲ್ಲ. ಯಾಕೆಂದರೆ ಆಳದಲ್ಲಿ ಈ ಕಾರ್ಮಿಕರ ಬದುಕಿನ ಬಗ್ಗೆ ನಮ್ಮೆಳಗೆ ತುಚ್ಛೀಕರಣವಿದೆ. ತಂತ್ರಜ್ಞಾನದಲ್ಲಿ ಅಪಾರ ಸಾಧನೆಗಳನ್ನು ಮಾಡಿದ್ದೇವೆ ಎಂದು ನಾವು ವಿಶ್ವದ ಮುಂದೆ ಕೊಚ್ಚಿಕೊಳ್ಳುತ್ತೇವೆ. ಇದೇ ಸಂದರ್ಭದಲ್ಲಿ ಸಣ್ಣದೊಂದು ಮ್ಯಾನ್‌ಹೋಲ್‌ಗೆ ಇಳಿದು ಅದನ್ನು ಶುಚೀಕರಿಸುವುದಕ್ಕೆ ಬೇಕಾದ ತಂತ್ರಜ್ಞಾನ ನಮ್ಮಲ್ಲಿ ಯಾಕಿಲ್ಲ? ಯಾಕೆಂದರೆ, ಇಲ್ಲಿ ಅದರ ಅವಶ್ಯಕತೆ ಇಲ್ಲ. ಈ ದೇಶದಲ್ಲಿ ಇಂತಹ ಕೆಲಸಕ್ಕೆ ಇಂತಹದೇ ಜನರನ್ನು ಅನಧಿಕೃತವಾಗಿ ಘೋಷಿಸಲಾಗಿದೆ. ಆದುದರಿಂದ, ಈ ವರ್ಗ ಅಸ್ತಿತ್ವದಲ್ಲಿರುವವರೆಗೆ ಯಾವ ತಂತ್ರಜ್ಞಾನದ ಅಗತ್ಯವೂ ಇಲ್ಲ ಎನ್ನುವುದನ್ನು ನಾವು ಮಾನಸಿಕವಾಗಿ ಒಪ್ಪಿಕೊಂಡಿದ್ದೇವೆ.

ಮಂಗಳೂರಿನ ಮೀನು ಸಂಸ್ಕರಣಾ ಘಟಕವೊಂದರಲ್ಲಿ ಐವರು ಕಾರ್ಮಿಕರು ತ್ಯಾಜ್ಯದ ಗುಂಡಿಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರು ಬಿಟ್ಟರೆ ಮಂಗಳೂರು ಅಭಿವೃದ್ಧಿಯ ವಿಷಯದಲ್ಲಿ ದಾಪುಗಾಲಿಟ್ಟು ಮುಂದೆ ಸಾಗುತ್ತಿದೆ. ಇಲ್ಲಿನ ಅಭಿವೃದ್ಧಿಗಾಗಿ ನೂರಾರು ಜನರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಅಗಲವಾಗುತ್ತಿರುವ ರಸ್ತೆ ಹಲವು ಬದುಕುಗಳನ್ನು ನುಂಗಿ ಹಾಕಿದೆ. ಒಎನ್‌ಜಿಸಿ, ಎಂಎಸ್‌ಇಝೆಡ್, ಸ್ಮಾರ್ಟ್‌ಸಿಟಿ, ಎಂಆರ್‌ಪಿಲ್ ಇಲ್ಲಿನ ಜನಜೀವನದ ಮೇಲೆ ಬೇರೆ ಬೇರೆ ರೀತಿಯಲ್ಲಿ ದುಷ್ಪರಿಣಾಮಗಳನ್ನು ಬೀರುತ್ತಿವೆಯಾದರೂ, ‘ಅಭಿವೃದ್ಧಿ’ಯ ಹೆಸರಿನಲ್ಲಿ ಜನರು ಅವುಗಳನ್ನು ಸಹಿಸಿಕೊಳ್ಳಲು ಕಲಿತಿದ್ದಾರೆ. ಆದರೂ ಆಗಾಗ ಜನರು ಸ್ಫೋಟಗೊಳ್ಳುತ್ತಿರುತ್ತಾರೆ. ಈ ಅಭಿವೃದ್ಧಿಯ ತಳಸ್ತರದ ಕೆಲಸಗಳಿಗಾಗಿ ಸ್ಥಳೀಯ ಜನರನ್ನು ಕಂಪೆನಿಗಳು ಬಳಸಿಕೊಳ್ಳುವುದು ತೀರಾ ಕಡಿಮೆ. ಅದಕ್ಕೆ ಕಾರಣಗಳೂ ಇವೆ. ತಳಸ್ತರದಲ್ಲಿರುವ ಕೆಲಸಗಳು ಕಂಪೆನಿಯ ಹಲವು ಬಂಡವಾಳಗಳನ್ನು ಬಯಲಿಗೆಳೆಯುತ್ತವೆ. ಸ್ಥಳೀಯರ ಸಂಖ್ಯೆ ಹೆಚ್ಚಿದಂತೆಯೇ ಅವರು ನಾಳೆ ಪ್ರತಿಭಟನೆಗಳಿಗೂ ಇಳಿಯಬಹುದು. ಕಂಪೆನಿಯ ಜೊತೆಗೆ ಅಸಹಕಾರಗಳನ್ನು ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇವರು ಕೊಡುವ ಅಲ್ಪ ವೇತನಕ್ಕೆ ಭಾರೀ ಶ್ರಮದ ಕೆಲಸವನ್ನು ನಿರ್ವಹಿಸಲು ಜನರು ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಭಾರತದ ಬಡ ಕಾರ್ಮಿಕರನ್ನು ಇವರು ಬಳಸಿಕೊಳ್ಳುತ್ತಾರೆ. ಮಾಲಕರಿಗೆ ಇದರಿಂದ ಹಲವು ಲಾಭಗಳಿವೆ. ಮುಖ್ಯವಾಗಿ ಅವರು ಮಂಗಳೂರಿಗೆ ಅಪರಿಚಿತರು. ಹೊರಗಿನವರು. ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿರುವುದರಿಂದ ಭಾಷೆ ಮತ್ತು ಸಂವಹನ ತೊಡಕಿನಿಂದಾಗಿ ಸಂಘಟಿತರಾಗುವುದು ಅಸಾಧ್ಯ. ಉತ್ತರ ಭಾರತದಲ್ಲಿರುವ ತೀವ್ರ ಬಡತನ, ನಿರುದ್ಯೋಗಗಳಿಂದಾಗಿ ಸಣ್ಣ ವೇತನಕ್ಕೆ ದುಡಿಯಲು ಅವರು ಒಪ್ಪುತ್ತಾರೆ. ತಮ್ಮ ಊರು, ಕುಟುಂಬವನ್ನು ಬಿಟ್ಟು ಬಂದಿರುವುದರಿಂದ ಆಗಾಗ ರಜೆ ಪಡೆದುಕೊಳ್ಳುವ ಪ್ರಶ್ನೆಯೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮಾಲಕರ ವಿರುದ್ಧ ಪ್ರತಿಭಟನೆ ಮಾಡುವ ಶಕ್ತಿ, ಬಲ ಇವರಿಗಿರುವುದಿಲ್ಲ. ಆದುದರಿಂದಲೇ ಇಂದು ಮಂಗಳೂರು ತುಂಬಾ ದೂರದ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರದಂತಹ ರಾಜ್ಯಗಳ ಕೂಲಿ ಕಾರ್ಮಿಕರು ತುಂಬಿದ್ದಾರೆ. ಮೊನ್ನೆ ತ್ಯಾಜ್ಯದ ಗುಂಡಿಗೆ ಬಿದ್ದು ಮೃತಪಟ್ಟ ಐವರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ.

ತ್ಯಾಜ್ಯದ ಗುಂಡಿಯಲ್ಲಿ ಸಮಸ್ಯೆಯಾದಾಗ ಕೂಲಿ ಕಾರ್ಮಿಕರನ್ನು ಅದರೊಳಗೆ ಇಳಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೊಂದು ಈ ಸಾವಿನ ಮೂಲಕ ಚರ್ಚೆಯಲ್ಲಿದೆ. ಒಬ್ಬ ಬಿದ್ದಾಗ ಆತನನ್ನು ರಕ್ಷಿಸಲು ಇತರರು ಧಾವಿಸಿದ್ದಾರೆ. ಹೀಗೆ ಸಾಲು ಸಾಲಾಗಿ ಐವರು ಜೀವ ಕಳೆದುಕೊಂಡಿದ್ದಾರೆ. ಸದ್ಯಕ್ಕೆ ಈ ಮೀನು ಸಂಸ್ಕರಣಾ ಘಟಕಕ್ಕೆ ಜಿಲ್ಲಾಡಳಿತ ಬೀಗ ಜಡಿದಿದೆಯಾದರೂ ಇದು ಕಾಟಾಚಾರದ ಕ್ರಮ. ಪರ ಊರಿನ ವಿಳಾಸವಿಲ್ಲದ ಐದು ಮಂದಿ ಕೂಲಿಕಾರ್ಮಿಕರ ಜೀವಕ್ಕಾಗಿ ಘಟಕವನ್ನು ಮುಚ್ಚುವಷ್ಟು ಹೃದಯವೈಶಾಲ್ಯವನ್ನು ನಮ್ಮ ವ್ಯವಸ್ಥೆ ಹೊಂದಿಲ್ಲ. ಸಾರ್ವಜನಿಕ ಆಕ್ರೋಶವನ್ನು ತಣಿಸುವುದಕ್ಕಾಗಿ ಮತ್ತು ಮಾಧ್ಯಮಗಳ ಬಾಯಿಗೆ ಬೀಗ ಜಡಿಯುವುದಕ್ಕಾಗಿ ಆರೋಪಿ ಸ್ಥಾನದಲ್ಲಿರುವ ಶ್ರೀ ಉಲ್ಕಾ ಎಲ್‌ಎಲ್‌ಪಿ ಕಾರ್ಖಾನೆಗೆ ತಾತ್ಕಾಲಿಕ ಬೀಗ ಜಡಿಯಲಾಗಿದೆ. ಜನರು ಘಟನೆಯನ್ನು ಮರೆತ ಬೆನ್ನಿಗೆ ಕಾರ್ಖಾನೆಯ ಬಾಗಿಲು ತೆರೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದೇ ರೀತಿಯಲ್ಲಿ ಕಾರ್ಮಿಕರ ಸುರಕ್ಷೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವ ಹಲವು ಘಟಕಗಳು, ಕಾರ್ಖಾನೆಗಳು ಮಂಗಳೂರಿನಲ್ಲಿವೆ. ಇವುಗಳ ಕುರಿತಂತೆ ಅಧಿಕಾರಿಗಳಿಗೆ ಮಾಹಿತಿಗಳು ಇಲ್ಲ ಎಂದಲ್ಲ. ಆದರೂ ಇದರ ಬಗ್ಗೆ ಕಾರ್ಮಿಕ ಇಲಾಖೆಗಳಾಗಲಿ, ಜಿಲ್ಲಾಡಳಿತವಾಗಲಿ ಮಾತನಾಡುತ್ತಿಲ್ಲ. ಇಂತಹ ದುರಂತಗಳು ನಡೆದಾಗಷ್ಟೇ ಅನಿವಾರ್ಯವಾಗಿ ಅಧಿಕಾರಿಗಳು ವೌನ ಮುರಿಯಬೇಕಾಗುತ್ತದೆ.

ಕಾರ್ಖಾನೆಯಲ್ಲಿ ಅಪ್ರಾಪ್ತ ವಯಸ್ಕರು ಕೆಲಸ ಮಾಡುತ್ತಿರುವುದು ಈ ಘಟನೆಯಿಂದ ಬೆಳಕಿಗೆ ಬಂದಿದೆ. ಮೃತ ಪಟ್ಟವರಲ್ಲಿ ಒಬ್ಬನ ವಯಸ್ಸು 17 ಎನ್ನಲಾಗಿದೆ. ಇವರೆಲ್ಲರೂ ಗುತ್ತಿಗೆಯಾಧಾರದಲ್ಲಿ ಕಾರ್ಖಾನೆಗಳಿಗೆ ರವಾನೆಯಾದವರು. ಒಂದು ರೀತಿಯಲ್ಲಿ ಗುತ್ತಿಗೆಯ ರೂಪದಲ್ಲೇ ಕೆಲಸ ಮಾಡುವವರು. ಬಹುತೇಕರು ಅನಕ್ಷರಸ್ಥರು. ತಮ್ಮ ಕಾರ್ಮಿಕ ಹಕ್ಕುಗಳ ಬಗ್ಗೆ ಯಾವ ಮಾಹಿತಿಯೂ ಇವರಿಗಿಲ್ಲ. ಕಾರ್ಮಿಕ ಇಲಾಖೆಗಳು ಈ ಕಾರ್ಮಿಕರಿಗೆ ತಮ್ಮ ಹಕ್ಕುಗಳ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿಸುವುದಿಲ್ಲ. ತಮಗೆ ಅನ್ಯಾಯವಾಗುತ್ತಿದೆ ಎನ್ನುವ ಅರಿವಿದ್ದರೂ ಅದನ್ನು ಪ್ರಶ್ನೆ ಮಾಡುವ ಧೈರ್ಯ ತೋರಿಸುವವರೂ ಯಾರೂ ಇಲ್ಲ. ಯಾರಾದರೂ ಪ್ರಶ್ನಿಸಿದರೆ ಅವರನ್ನು ಯಾವ ದಯೆ, ದಾಕ್ಷಿಣ್ಯವಿಲ್ಲದೆ ಗುತ್ತಿಗೆದಾರರ ಮೂಲಕ ತಮ್ಮ ಊರಿಗೆ ಸಾಗ ಹಾಕಲಾಗುತ್ತದೆ. ಇವರೆಲ್ಲರ ಅಸಹಾಯಕತೆಗಳನ್ನು ಕಾರ್ಖಾನೆಗಳ ಮಾಲಕರು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಾರೆ. ಕೊರೋನೋತ್ತರ ದಿನಗಳಲ್ಲಿ ಕೂಲಿ ಕಾರ್ಮಿಕರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಒಂದು ಹೊತ್ತಿನ ಊಟದಿಂದಲೇ ತೃಪ್ತಿ ಪಡುವ ಸ್ಥಿತಿಯನ್ನು ತಲುಪಿದ್ದಾರೆ. ಎಲ್ಲಾದರೂ, ಹೇಗಾದರೂ ಸರಿ, ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಪರಿಸ್ಥಿತಿಯಲ್ಲಿರುವ ಉತ್ತರ ಭಾರತೀಯರನ್ನು ಈ ಕಾರ್ಖಾನೆಗಳು ಸುಲಭದಲ್ಲಿ ಶೋಷಣೆ ಮಾಡುತ್ತದೆ.

ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದ ಕುರಿತಂತೆ ಜನಪ್ರತಿನಿಧಿಗಳು ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸಿದ್ದಾರೆ. ಘಟನೆಯ ಸ್ಥಳಕ್ಕೆ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕಾಗಿತ್ತು. ಸತ್ತವರು ವಿಳಾಸವಿಲ್ಲದ ಯಾವುದೋ ರಾಜ್ಯದ ಕೂಲಿಕಾರ್ಮಿಕರಾಗಿರಬಹುದು. ಆದರೆ ಸತ್ತಿರುವುದು ‘ಅಭಿವೃದ್ಧಿಯ ಬಗ್ಗೆ ಕೊಚ್ಚಿಕೊಳ್ಳುತ್ತಿರುವ ಮಂಗಳೂರಿನಲ್ಲಿ’. ಎಲ್ಲೋ ಉತ್ತರ ಭಾರತದಲ್ಲಿ ಇಂತಹ ಘಟನೆ ನಡೆದಿದ್ದರೆ ‘ಅಲ್ಲಿ ಅದು ಸಾಮಾನ್ಯ’ ಎಂದು ಹೇಳಬಹುದು. ಆದರೆ ಮಂಗಳೂರು ಹಲವು ಕಾರಣಗಳಿಗಾಗಿ ದೇಶದಲ್ಲಿ ಗೌರವಾನ್ವಿತ ನಗರವಾಗಿ ಗುರುತಿಸಿಕೊಂಡಿದೆ. ಆದರೆ ಇಲ್ಲಿನ ಅಭಿವೃದ್ಧಿ ಬಡ ಕೂಲಿಕಾರ್ಮಿಕರ ಹೆಣಗಳ ಮೇಲೆ ಕಟ್ಟಲಾಗುತ್ತಿದೆ ಎನ್ನುವುದು ಯಾವ ಕಾರಣಕ್ಕೂ ಮಂಗಳೂರಿಗೆ ಗೌರವವನ್ನು ತರುವುದಿಲ್ಲ. ಇದೇ ಸಂದರ್ಭದಲ್ಲಿ ಒಂದೆರಡು ಕಾರ್ಮಿಕ ಸಂಘಟನೆಗಳು ಮೃತರ ಪರವಾಗಿ ಬೀದಿಗಿಳಿದುದರಿಂದ, ಕಂಪೆನಿ 15 ಲಕ್ಷ ರೂಪಾಯಿಯನ್ನು ಸಂತ್ರಸ್ತರಿಗೆ ನೀಡಲು ಒಪ್ಪಿದೆ. ಈ ಕಾರ್ಮಿಕ ಸಂಘಟನೆಗಳ ಕಾರ್ಯ ಶ್ಲಾಘನೀಯ. ಅಭಿವೃದ್ಧಿಯ ತಳದಲ್ಲಿ ಹೆಪ್ಪುಗಟ್ಟಿ ಕೂತಿರುವ ಈ ಕತ್ತಲಿಗೆ ಬೆಳಕು ಹರಿಸಲು ಕಾರ್ಮಿಕ ಸಂಘಟನೆಗಳು ಇನ್ನಷ್ಟು ಗಟ್ಟಿಯಾಗುವ ಅತ್ಯಗತ್ಯವಿದೆ ಎನ್ನುವುದನ್ನು ಇದು ಹೇಳುತ್ತದೆ. ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಗಳು ಇನ್ನಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ವಿವಿಧ ಕಾರ್ಖಾನೆಗಳ ಕಾರ್ಮಿಕ ಸುರಕ್ಷತೆಗೆ ಸಂಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News