×
Ad

ಶಾಂತಿಯಲ್ಲಿದ್ದ ರಾಜ್ಯದಲ್ಲಿ ಕೊಲೆ, ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ: ಈಶ್ವರಪ್ಪ

Update: 2022-04-20 13:15 IST

ಶಿವಮೊಗ್ಗ: ಶಾಂತಿಯಲ್ಲಿದ್ದ ರಾಜ್ಯದಲ್ಲಿ ಕೊಲೆ, ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡುತ್ತಾನೆ. ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋದಿಸುವ ಹೇಳಿಕೆ‌ ಕೊಡುತ್ತಾರೆ. ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡಿಯುವುದನ್ನು ನೋಡುತ್ತಿದ್ದಾರೆ. ಆಸ್ಪತ್ರೆ, ದೇವಾಲಯ, ಪೊಲೀಸ್ ತಲೆಗಳನ್ನು ಹುಡುಕಿ ಕಲ್ಲು ಹೊಡೆಯುತ್ತಾರೆ. ಈ ರೀತಿಯ ಕಲ್ಲು ತೂರಾಟ ಮಾಡುವ ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು. ಇದನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದುತ್ವ ಸಂಘಟನೆಗಳಿಗಿದೆ. ಆದರೆ ನಾವು ಕಾನೂನು ಕೈಗೆ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಇನ್ನು ಇಷ್ಟೆಲ್ಲಾ ಘಟನೆ ನಡೆದರೂ ಕಾಂಗ್ರೆಸ್ ಖಂಡಿಸುವ ಕೆಲಸ ಮಾಡಿಲ್ಲ. ಕಲ್ಲಂಗಡಿ ಒಡೆದಾಗ ಎಲ್ಲರೂ ಬೊಬ್ಬೆ ಹಾಕಿದರು. ಪೊಲೀಸರ ತಲೆ ಒಡೆದರೂ ಇಂದು ಮಾತನಾಡುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಮಾತನಾಡುತ್ತಿಲ್ಲ. ಎಲ್ಲಾ ಮುಸಲ್ಮಾನರು ರಾಷ್ಟ್ರದ್ರೋಹಿಗಳು ಎಂದು ನಾನು ಹೇಳಲ್ಲ. ಇಂತಹ ಕೃತ್ಯದಲ್ಲಿ ಭಾಗವಹಿಸಿದವರು ರಾಷ್ಟ್ರದ್ರೋಹಿಗಳು. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಮುಸಲ್ಮಾನರ ಓಲೈಕೆ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರದ ದಾಹಕ್ಕೆ ಕೊಲೆ, ದೊಂಬಿ ಗಳಾಗುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಬೊಮ್ಮಾಯಿ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಶಾಸಕ ಹರತಾಳು‌ ಹಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್ ಚನ್ನಬಸಪ್ಪ, ಮೇಯರ್ ಸುನೀತಾ ಅಣ್ಣಪ್ಪ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News