ಸುರತ್ಕಲ್: ಮಾರುಕಟ್ಟೆ ಎದುರಲ್ಲೇ ತ್ಯಾಜ್ಯ ಸುರಿಯುತ್ತಿರುವ ಆ್ಯಂಟನಿ ಸಂಸ್ಥೆ

Update: 2022-04-20 09:45 GMT

ಸುರತ್ಕಲ್: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ವಿಭಾಗದ ತ್ಯಾಜ್ಯವನ್ನು ಜನವಸತಿ ಪ್ರದೇಶ ಹಾಗೂ ಮುಡಾ ಮಾರುಕಟ್ಟೆಯ ಮುಂದೆಯೇ ಸುರಿಯುತ್ತಿದ್ದು, ಸ್ವಚ್ಛ ಭಾರತದ ಪರಿಕಲ್ಪನೆಯನ್ನೇ ಅಣುಕಿಸುವಂತಿದೆ.

ಸುರತ್ಕಲ್ ಮೂಡ ಮಾರುಕಟ್ಟೆಯ ಕೋಳಿ ಮಾರುಕಟ್ಟೆ ಬಳಿ ಪ್ರತಿದಿನ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ತ್ಯಾಜ್ಯದ ನೀರು ರಸ್ತೆ ತುಂಬೆಲ್ಲ ಹರಿದು ವಾಸನೆ ಬರುತ್ತಿದ್ದು, ತ್ಯಾಜ್ಯವನ್ನು ಕೋಳಿ ಮಾಂಸದ ಮಾರುಕಟ್ಟೆಯ ದ್ವಾರದ ಬಳಿಯೇ ಸುರಿಯುತ್ತಿರುವುದರಿಂದ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಒಂದೆಡೆ ಸ್ವಚ್ಛ ಭಾರತದ ಪರಿಕಲ್ಪನೆಗೆ ತದ್ವಿರುದ್ಧವಾಗಿದ್ದರೆ, ಇನ್ನೊಂದೆಡೆ ಆರೋಗ್ಯ ಸಮಸ್ಯೆಗಳಿಗೆ ಘನತ್ಯಾಜ್ಯ ಶೇಖರಣೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪವಾಗಿದೆ.

ಈ ಮೊದಲು ತ್ಯಾಜ್ಯವನ್ನು ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್‌ಗೆ ಹೋಗುವ ರಸ್ತೆ ಬದಿ ಸುರಿಯಲಾಗುತ್ತಿತ್ತು. ಆ ಬಳಿಕ ಅದನ್ನು ಮಾರುಕಟ್ಟೆ ರಸ್ತೆಗೆ ವರ್ಗಾಯಿಸಲಾಯಿತು. ಈ ವೇಳೆ ಅಲ್ಲಿನ ಅಪಾರ್ಟ್ಮೆಂಟ್‌ಗಳ ನಿವಾಸಿಗಳು ಮಹಾನಗರ ಪಾಲಿಕೆಗೆ ದೂರು ನೀಡಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಮುಡಾ ಮಾರುಕಟ್ಟೆಯ ಕೋಳಿ ಅಂಗಡಿಗಳ ದ್ವಾರದ ಬಳಿ ಸುರಿಯ ಲಾಗುತ್ತಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.

ಘನ ತ್ಯಾಜ್ಯ ಸಂಗ್ರಹಿಸುವ ಸ್ಥಳದಿಂದ 20-30 ಅಡಿ ಅಂತರದಲ್ಲಿ ಒಂದು ಖಾಸಗಿ ಆಸ್ಪತ್ರೆ ಮತ್ತು ಇನ್ನೊಂದು ಭಾಗದಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾಚರಿಸುತ್ತಿದೆ. ಅಲ್ಲದೆ, ಒಂದು ಭಾಗದಲ್ಲಿ ದಿನಸಿ ಅಂಗಡಿ ಕಾರ್ಯಾಚರಿಸುತ್ತಿದ್ದರೆ, ತ್ಯಾಜ್ಯದ ವಾಸನೆ ಯುಕ್ತ ನೀರು ಹರಿಯುವ ರಸ್ತೆಯ ಬದಿಯಲ್ಲೇ ಪಾನ್ ಮಸಾಲದ ಅಂಗಡಿಗಳು, ಎಳನೀರಿನ ಅಂಗಡಿ ಸಹಿತ ಕ್ಯಾಂಟೀನ್ ಹೊಟೇಲ್‌ಗಳು ಕಾರ್ಯಾಚರಿಸುತ್ತಿವೆ.

'ತ್ಯಾಜ್ಯ ಸುರಿಯುತ್ತಿರುವುದರಿಂದ ವ್ಯಾಪಾರಕ್ಕೆ ತೊಂದರೆ ಯಾಗುತ್ತಿದೆ. ಗ್ರಾಹಕರು ಬರುತ್ತಿಲ್ಲ. ಮಹಾನಗರ ಪಾಲಿಕೆಯ ಸುರತ್ಕಲ್ ವಿಭಾಗ ಕಚೇರಿ ಹಾಗೂ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ಪಡೆದಿರುವ ಆ್ಯಂಟನಿ ಸಂಸ್ಥೆಗೆ ಹಲವು ಬಾರಿ ದೂರು ನೀಡಿದರೂ ಯಾರೊಬ್ಬರೂ ಕ್ರಮಕ್ಕೆ ಮುಂದಾಗಿಲ್ಲ. ಘನತ್ಯಾಜ್ಯವನ್ನು ಇಲ್ಲೇ ಶೇಖರಿಸಲಾಗುತ್ತಿದೆ ಎಂದು ಕರಾವಳಿ ಕೋಳಿ ಮಾರಾಟಗಾರರ ಸಂಘದ ಅಧ್ಯಕ್ಷ ಹಾಗೂ ಮುಡಾ ಮಾರುಕಟ್ಟೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಬಶೀರ್ ಆರೋಪಿಸಿದ್ದಾರೆ. ಕೋಳಿ ಮಾಂಸದ ಮಾರುಕಟ್ಟೆಗೆ ಬರುವ ಗ್ರಾಹಕರು ವಾಹನ ನಿಲ್ಲಿಸಲೂ ಅವಕಾಶವಿಲ್ಲದೆ ಪರದಾಡುವಂತಾಗಿದೆ ಎಂದು ಗ್ರಾಹಕರೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದರು.

'ನಾನು ಅಂಗವಿಕಲ. ನನ್ನ ಸಂಸಾರ ಸಲಹಲು ಇರುವ ಗೂಡಂಗಡಿ ಪಕ್ಕದಲ್ಲೇ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸುರತ್ಕಲ್‌ನ ಸಂಪೂರ್ಣ ತ್ಯಾಜ್ಯವನ್ನು ಸುರಿಯುತ್ತಾರೆ. ವಾಸನೆ, ನೊಣಗಳ ಉಪಟಳ, ಪಾರ್ಕಿಂ ಗ್‌ಗೆ ಸ್ಥಳಾವಕಾಶ ಇಲ್ಲದಿರುವುದರಿಂದ ಗ್ರಾಹಕರೇ ಬರುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾನೂ ಸಹಿತ ಮಾರುಕಟ್ಟೆಯ ನೂರಕ್ಕೂ ಅಧಿಕ ಅಂಗಡಿಗಳು ಬಾಗಿಲು ಹಾಕಬೇಕಾದ ಪರಿಸ್ಥಿತಿ ಇದೆ'ಎಂದು ರವೀಂದ್ರ ಶೆಟ್ಟಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಕ್ಷಣ ಮನಪಾ ಮತ್ತು ಆರೋಗ್ಯ ಇಲಾಖೆ ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಘನ ತ್ಯಾಜ್ಯ ಸಂಗ್ರಹಕ್ಕೆ ಸೂಕ್ತ ಸ್ಥಳದ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಂಗಳೂರು ಮನಪಾವು ಸ್ಮಾರ್ಟ್ ಸಿಟಿಯ ಬಗ್ಗೆ ಮಾತನಾಡುತ್ತಿದ್ದು, ಅದು ಮಂಗಳೂರು ನಗರಕ್ಕೆ ಮಾತ್ರ ಸೀಮಿತವಾದಂತಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸಬೇಕಿರುವ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಇಲಾಖೆಗೆ ಎಷ್ಟೇ ಮನವಿ ಮಾಡಿಕೊಂಡರೂ ಕ್ಯಾರೇ ಅನ್ನುತ್ತಿಲ್ಲ.

ರವೀಂದ್ರ ಶೆಟ್ಟಿ, ಗೂಡಂಗಡಿ ಮಾಲಕ

ಹೊಸ ಮಾರುಕಟ್ಟೆ ಅಧ್ಯಕ್ಷರು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಕ್ರು ಕೈಗೊಳ್ಳುವಂತೆ ಕಮಿಷನರ್‌ಗೆ ಸೂಚಿಸಲಾಗಿದೆ. ತ್ಯಾಜ್ಯ ಸಾಗಾಟದ ದೊಡ್ಡ ವಾಹನ ಬಂದು ನಿಂತ ಬಳಿಕ ವಾಹನಕ್ಕೆ ನೇರವಾಗಿ ತ್ಯಾಜ್ಯವನ್ನು ವರ್ಗಾಯಿಸಲು ಸೂಚಿಸಲಾಗಿದೆ. ನಾಳೆ ಕಾರ್ಪೊರೇಟರ್‌ಗಳು ಮತ್ತೆ ಪರಿಶೀಲಿಸಲಿದ್ದಾರೆ.

ಡಾ.ಭರತ್ ಶೆಟ್ಟಿ, ಶಾಸಕ ಮಂಗಳೂರು ಉತ್ತರ

Writer - ರಹ್ಮಾನ್ ಹಳೆಯಂಗಡಿ

contributor

Editor - ರಹ್ಮಾನ್ ಹಳೆಯಂಗಡಿ

contributor

Similar News