ಪಿಎಫ್‍ಐ ಜೊತೆಗೆ ಆರೆಸ್ಸೆಸ್, ಶ್ರೀರಾಮಸೇನೆಯನ್ನು ನಿಷೇಧಿಸಲಿ: ಮಾಜಿ ಸಚಿವ ಎಂ.ಬಿ.ಪಾಟೀಲ್

Update: 2022-04-20 12:17 GMT

ಬಾಗಲಕೋಟೆ, ಎ. 20: ‘ಕೋಮುಭಾವನೆ ಕೆರಳಿಸುವ ಸಂಘಟನೆಗಳನ್ನು ನಿಷೇಧ ಮಾಡಿದರೆ ನಮ್ಮದೇನು ಅಭ್ಯಂತರವಿಲ. ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳ ಜೊತೆಗೆ ಆರೆಸೆಸ್ಸ್, ವಿಎಚ್‍ಪಿ, ಶ್ರೀರಾಮಸೇನೆ, ಬಜರಂಗದಳ ಎಲ್ಲವನ್ನೂ ನಿಷೇಧಿಸಲಿ' ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರೊ ಒಬ್ಬ ಮೊಬೈಲ್ ಸ್ಟೇಟಸ್ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಗಲಾಟೆಯಾಯಿತು. ಗಲಭೆಗೆ ಪ್ರಚೋದನೆ ನೀಡಲಾಯಿತು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಆಗಬೇಕು. ಆದರೆ, ನಿರಪರಾಧಿಗಳಿಗೆ ಕಿರುಕುಳ, ಬಂಧನ ಸರಿಯಲ್ಲ' ಎಂದು ಆಕ್ಷೇಪಿಸಿದರು.

‘ಆರೆಸೆಸ್ಸ್ ದೇಶಭಕ್ತ ಸಂಘಟನೆ ಎಂದು ಹೇಳಲಾಗುತ್ತದೆ. ಆದರೆ, ಆರೆಸೆಸ್ಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಆರೆಸೆಸ್ಸ್‍ನವರೆಲ್ಲರೂ ಬ್ರಿಟಿಷರ ಏಜೆಂಟ್ ಆಗಿದ್ದರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಸಾವರ್ಕರ್ 3 ಬಾರಿ ಬ್ರಿಷರಿಗೆ ಕ್ಷಮಾಪಣೆ ಕೋರಿ ಪತ್ರ ಬರೆದಿದ್ದರು. ಬಿಜೆಪಿ, ಆರೆಸೆಸ್ಸ್‍ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಕೋಮುಭಾವನೆ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಯಿಸಿಕೊಳ್ಳುತ್ತಿದ್ದಾರೆ. ಜನರಿಗೂ ಸ್ವಲ್ಪ ದಿನದಲ್ಲಿ ಸತ್ಯ ಗೊತ್ತಾಗಲಿದೆ' ಎಂದು ಪಾಟೀಲ್ ಹೇಳಿದರು.

‘ಕರ್ನಾಟಕ ರಾಜ್ಯ ಕೋಮು ಸೌಹಾರ್ದತೆಗೆ ಹೆಸರಾಗಿದ್ದು, ನಮ್ಮದು ‘ಸರ್ವ ಜನಾಂಗದ ಶಾಂತಿಯ ತೋಟ'. ಅದನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ ಅವರು, ರಾಜ್ಯ ಸರಕಾರ ತಮ್ಮ ವೈಫಲ್ಯ ಹಾಗೂ ಶೇ.40ರಷ್ಟು ಕಮಿಷನ್ ಆರೋಪ ಮುಚ್ಚಿಕೊಳ್ಳಲು ಹಿಜಾಬ್, ಹಲಾಲ್ ವಿಷಯ ಮುನ್ನೆಲೆಗೆ ತರುತ್ತಿದ್ದಾರೆ' ಎಂದು ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿ ಸಿಬ್ಬಂದಿ ಮೇಲೂ ತನಿಖೆಯಾಗಬೇಕು. ಕಮಿಷನ್ ವಿಚಾರವಾಗಿ ಸಿಎಂ ಕಚೇರಿ ಸೇರಿದಂತೆ ಕೆಲವು ಸಚಿವರ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದಾರೆ ಎಂದ ಅವರು, ‘ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಆಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಏನು ಮಾಡುತ್ತಿತ್ತು. ಅಲ್ಲದೆ, ಅಧಿಕಾರಕ್ಕೆ ಬಂದು ಇಷ್ಟು ದಿನ ಸುಮ್ಮನೆ ಕುಳಿತಿದ್ದು ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News