ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಸುನೀಲ್ ಕುಮಾರ್

Update: 2022-04-20 15:45 GMT
ಸಚಿವ ಸುನೀಲ್ ಕುಮಾರ್

ಬೆಂಗಳೂರು, ಎ. 20: ‘ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ. ಅಲ್ಲದೆ, ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಏನು ಆಗಿಲ್ಲ. ಆದರೆ, ಕಾಂಗ್ರೆಸ್ ಮುಖಂಡರು ಅನಗತ್ಯವಾಗಿ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಆಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ' ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ದೂರಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ನಮಗೆ ಕಲ್ಲಿದ್ದಲ ಕೊರತೆ ಆಗಿಲ್ಲ. ಆದರೆ, ಕಲ್ಲಿದ್ದಲು ಸರಬರಾಜಿನಲ್ಲಿ ಕೊರತೆ ಆಗುತ್ತಿಲ್ಲ. ಮೂರು ತಿಂಗಳಿಂದ ವಿದ್ಯುತ್ ಬೇಡಿಕೆಯನ್ನು ಗಮನಿಸುತ್ತಿದ್ದು, ಅದನ್ನು ನಿವಾರಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಮಾರ್ಚ್ 21ಕ್ಕೆ 14,800 ಮೆ.ವ್ಯಾ. ಬೇಡಿಕೆ ಇರುವ ಸಂದರ್ಭದಲ್ಲೇ ಲೋಡ್ ಶೆಡ್ಡಿಂಗ್ ಮಾಡಿಲ್ಲ' ಎಂದು ವಿವರಣೆ ನೀಡಿದರು.

‘ರಾಯಚೂರು, ಬಳ್ಳಾರಿ ಯೂನಿಟ್‍ಗಳು ಕಲ್ಲಿದ್ದಲು ಕೊರತೆಯಿಂದ ಬಂದ್ ಆಗಿವೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಬೇಡಿಕೆ ಇಲ್ಲ ಎಂಬ ಕಾರಣಕ್ಕೆ ಸ್ಥಗಿತ ಮಾಡಲಾಗಿದೆಯೇ ಹೊರತು, ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಗಿತ ಮಾಡಿಲ್ಲ. ಮಾರ್ಚ್ 10ಕ್ಕೆ 10 ಸಾವಿರ ರೇಕುಗಳು ಕಲ್ಲಿದ್ದಲು ಬಂದಿತ್ತು. ಇದೀಗ 9 ಸಾವಿರ ರೇಕುಗಳು ಕಲ್ಲಿದ್ದಲು ಬರುತ್ತಿದೆ. 1.87 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನಿದೆ ಎಂದು ಅವರು ಮಾಹಿತಿ ನೀಡಿದರು.

‘ಇದರ ಜೊತೆಗೆ ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಸರಾಸರಿ ಬೇಡಿಕೆಯ ಅರ್ಧದಷ್ಟು ಭಾಗ ಈಗ ಸೋಲಾರ್ ಹಾಗೂ ಪವನಶಕ್ತಿಯ ಮೂಲದಿಂದ ವಿದ್ಯುತ್ ಲಭಿಸುತ್ತಿದೆ. ಹೀಗಾಗಿ ವಿದ್ಯುತ್ ಕ್ಷಾಮ ಎಂಬ ಕಾಂಗ್ರೆಸ್ ಕಟ್ಟುಕತೆಯಲ್ಲಿ ಅರ್ಥವೇ ಇಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ ಸಾಮಾನ್ಯ ಬೇಡಿಕೆಯ ದಿನದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಎಂತಹದೇ ದುರಿತ ಸ್ಥಿತಿ ನಿರ್ಮಾಣವಾದರೂ ಎಲ್ಲ ಬೇಡಿಕೆಗಳನ್ನು ಮೂರು ದಿನಗಳ ಕಾಲ ನೀಗಿಸಬಹುದಾದಷ್ಟು ಕಲ್ಲಿದ್ದಲು ದಾಸ್ತಾನು ರಾಜ್ಯದಲ್ಲಿ ಇದೆ. ಹೀಗಾಗಿ ಕಾಂಗ್ರೆಸ್ ನಾಯಕರು ಸೃಷ್ಟಿಸಿರುವ ಈ ಅಪಪ್ರಚಾರದಿಂದ ರಾಜ್ಯದ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾವುದೇ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯವಾದರೆ ಅದು ಸರಬರಾಜಿನಲ್ಲಿ ಆದ ಸಮಸ್ಯೆಯೇ ವಿನಾ ಕಲ್ಲಿದ್ದಲು ಕೊರತೆಯಿಂದ ಆಗಿದ್ದಲ್ಲ ಎಂದು ಅವರು ಮಾಹಿತಿ ನೀಡಿದರು.

‘ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಕೃಷಿ ಪಂಪ್‍ಸೆಟ್‍ಗಳಿಗೆ ಅಗತ್ಯವಾದ ವಿದ್ಯುತ್ ಬೇಡಿಕೆ ಪ್ರಮಾಣ ಕುಗ್ಗಿದೆ. ಬೇಡಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬಳ್ಳಾರಿ ಹಾಗೂ ರಾಯಚೂರು ಶಾಖೋತ್ಪನ್ನ ಘಟಕದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆಯೇ ಹೊರತು ಕಲ್ಲಿದ್ದಲು ಕೊರತೆಗಾಗಿ ಅಲ್ಲ' ಎಂದು ಅವರು ವಿವರಿಸಿದರು.

‘ಅಧಿಕಾರ ‘ಅಭಾವ ವೈರಾಗ್ಯ'ದಿಂದ ರೋಸಿ ಹೋಗಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ವಿದ್ಯುತ್ ಅಭಾವ ಇದೆ ಎಂಬ ಪ್ರಹಸನ ಸೃಷ್ಟಿಸಿದರೆ ಜನರು ‘ಶಾಕ್ ಟ್ರೀಟ್‍ಮೆಂಟ್' ನೀಡುತ್ತಾರೆಂಬುದನ್ನು ಕಾಂಗ್ರೆಸ್ ಮುಖಂಡರು ಮರೆಯಬಾರದು. ಸಿದ್ದರಾಮಯ್ಯ ಸರಕಾರದಲ್ಲಿ ರಾಜ್ಯಕ್ಕೆ ನೀಡಿದ್ದ ‘ಕತ್ತಲೆ ಭಾಗ್ಯ'ದ ದುರ್ದಿನಗಳನ್ನು ಸಾರ್ವಜನಿಕರು ಇನ್ನೂ ಮರೆತಿಲ್ಲ. ಅಪಪ್ರಚಾರ ನಡೆಸುವಾಗ ಕಾಂಗ್ರೆಸಿಗರು ಹತ್ತು ಬಾರಿ ಯೋಚಿಸಿ ಹೆಜ್ಜೆ ಇಡಬೇಕು'

-ಸುನಿಲ್ ಕುಮಾರ್ ಇಂಧನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News