×
Ad

ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ: ಶಾಸಕ ಸಿ.ಟಿ.ರವಿ

Update: 2022-04-20 22:11 IST

ಬೆಂಗಳೂರು, ಎ. 20: ‘ಸುಳ್ಳು ನಮ್ಮಲ್ಲಿ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು' ಎಂಬ ಪುರಂದರ ದಾಸರು ಹೇಳಿದ್ದು ಕಾಂಗ್ರೆಸ್ ಮುಖಂಡರನ್ನು ನೋಡಿಯೇ ಇರಬೇಕು. ಸುಳ್ಳೇ ಅವರ ಮನೆಯ ದೇವರಾಗಿದೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘500 ಎಕರೆ ಜಮೀನು ಹೊಂದಿದ್ದಾರೆಂದು ನನ್ನ ಮೇಲೆ ಆರೋಪ ಮಾಡಿರುವ ನಿಮಗೆ ಕಾನೂನೆ ಉತ್ತರ ಕೊಡುತ್ತದೆ. ಕಾನೂನಿನ ಆ ಕಬಂಧ ಬಾಹುಗಳಿಂದ ನೀವು ಮತ್ತು ನಿಮ್ಮ ಜೀ ಹುಜೂರ್ (ಗ್ರಾಮ ಪಂಚಾಯಿತಿ ಗೆಲ್ಲದ) ನಾಯಕರು ತಪ್ಪಿಸಿಕೊಳ್ಳಲಾರಿರಿ. ನನ್ನ ಸಾರ್ವಜನಿಕ ಜೀವನದಲ್ಲಿ ಇಂತಹ ಆರೋಪ ಮೊದಲೇನಲ್ಲ. ಹಿಂದೆ ಕೆಲ ಬಾರಿ ನಿಮ್ಮಂತ ಪ್ರಚಾರ ಪ್ರಿಯರು ಮಾಧ್ಯಮಗಳ ಮುಂದೆ ಬಂದು ಠುಸ್ ಪಟಾಕಿ ಹಾರಿಸಿ ಹೋಗಿದ್ದೀರಿ' ಎಂದು ಟೀಕಿಸಿದರು.

‘ಬರಿಗೈ ತೋರಿಸಿ ಮಾಧ್ಯಮಗಳ ಮುಂದೆ ಪ್ರಚಾರ ಗಿಟ್ಟಿಸಿಕೊಳ್ಳಲು ತಾವು ಮಾಡಿರುವ ಆರೋಪಕ್ಕೆ ಕಾನೂನು ಮೂಲಕವೇ ಉತ್ತರ ಕೊಡಲು ಸಿದ್ಧನಾಗಿದ್ದೇನೆ. ತಾವು ಮಾಡಿದ ಸುಳ್ಳು ಆರೋಪಕ್ಕೆ ಸಾರ್ವಜನಿಕ ಕ್ಷಮೆ ಯಾಚಿಸದಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಬಂಡಲ್ ಬಡಾಯಿ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ನನ್ನ ಮೇಲೆ 500 ಎಕರೆ ಅಕ್ರಮ ಜಮೀನು ಹೊಂದಿದ್ದಾರೆಂದು ಆರೋಪ ಮಾಡಿದ್ದಾರೆ. ಅವರ ಬಳಿ ಇರುವ 500 ಎಕರೆ ಸಿ.ಟಿ.ರವಿಗೆ ಸೇರಿದ ಭೂಮಿಯ ದಾಖಲೆಗಳನ್ನು ತಂದು ಕೊಟ್ಟರೆ, ತಂದು ಕೊಟ್ಟ ಪುಣ್ಯಾತ್ಮನಿಗೆ ಅರ್ಧ ದಾನವಾಗಿ ಕೊಟ್ಟುಬಿಡುತ್ತೇನೆ' ಎಂದು ಸವಾಲು ಹಾಕಿದರು.

‘ಎಂ.ಲಕ್ಷ್ಮಣ ಎಂಬ ಮಹಾನ್ ಸುಳ್ಳುಗಾರ ಮಾಧ್ಯಮಗಳ ಮುಂದೆ ಕುಳಿತರೆ ಸಾಕು ಸಾಕ್ಷಾತ್ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ತಮ್ಮದೇ ಪಕ್ಷದ ನಾಯಕರ ಬೇನಾಮಿ ಆಸ್ತಿ ಬಗ್ಗೆ ಹೇಳುವ ಬದಲು ತಪ್ಪಾಗಿ ಲಕ್ಷ್ಮಣ ಅವರು ನನ್ನ ಹೆಸರು ಹೇಳಿದಂತಿದೆ. ನಿಮ್ಮ ಪಕ್ಷದ ನಾಯಕರು ಹೊಲದಲ್ಲಿ ಗುದ್ದಲಿ, ಪಿಕಾಸಿ ಹಿಡಿದು ಕೂಲಿ ನಾಲಿ ಮಾಡಿ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆಯೇ? ಹಾಗಾದರೆ ಅಕ್ರಮ ಆಸ್ತಿ ಮಾಡಿ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದಲ್ಲೇ ಇರುವಾಗ ನನ್ನ ಮೇಲೆ ಅಕ್ರಮ ಆಸ್ತಿ ಆರೋಪ ಮಾಡುತ್ತಿದ್ದೀರಲ್ಲ ನಿಮಗೇನಾದರೂ ನೈತಿಕತೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

‘ನನ್ನ ಸಾರ್ವಜನಿಕ ಜೀವನದಲ್ಲಿ ನಾಲ್ಕು ಬಾರಿ ಚುನಾವಣೆಗೆ ನಿಂತು ಗೆದ್ದು ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೇನೆ. ಚುನಾವಣೆಗೆ ನಿಂತಾಗ ಚುನಾವಣಾಧಿಕಾರಿಗಳಿಗೆ ನನ್ನ ಆಸ್ತಿಯ ಕುರಿತು ಅಫಿಡವಿಟ್ ಸಲ್ಲಿಸಿದ್ದೇನೆ. 2004ರಲ್ಲಿ ಸಲ್ಲಿಸಿದ ಅಫಡವಿಟ್, 2021ರಲ್ಲಿ ಸಲ್ಲಿಸಿದ ಅಫಿಡವಿಟ್‍ಗೂ ವ್ಯತ್ಯಾಸವನ್ನು ನೋಡಿ. ನಿಮ್ಮ ಪಕ್ಷದ ಮುಖಂಡರ ಆಸ್ತಿ ವ್ಯತ್ಯಾಸವನ್ನು ಗಮನಿಸಿ ಆಗ ಕಳ್ಳರು ಯಾರು ಅನ್ನುವುದು ನಿಮಗೆ ಅರ್ಥವಾಗುತ್ತದೆ. ನಾನು ಯಾವುದೇ ಅಸ್ವಾಭಾವಿಕವಾಗಿ ಆಸ್ತಿಯನ್ನು ಸಂಪಾದಿಸಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News