×
Ad

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ ಕೋರ್ಟ್‍ನಿಂದ ಜೀವಾವಧಿ ಶಿಕ್ಷೆ

Update: 2022-04-20 22:16 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.20: ಅತ್ಯಾಚಾರ ಹಾಗೂ ಬಾಲ್ಯ ವಿವಾಹ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ, ನಗರದ 1ನೆ ತ್ವರಿತಗತಿ ಕೋರ್ಟ್  ಆದೇಶಿಸಿದೆ. 

ಕಮ್ಮನಹಳ್ಳಿ ನಿವಾಸಿ ಹರೀಶ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತನ ವಿರುದ್ಧದ ಅಪರಾಧಗಳು ಸಾಬೀತಾಗಿದ್ದು, ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೇ, ಸಂತ್ರಸ್ತ ಬಾಲಕಿಗೆ 4 ಲಕ್ಷ ಪರಿಹಾರ ನೀಡುವಂತೆ ಕೆಎಸ್‍ಎಲ್‍ಎಸ್‍ಎಗೆ ನಿರ್ದೇಶಿಸಿದೆ.

ಪ್ರಕರಣವೇನು: ಮಂಗಮ್ಮನಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಹರೀಶ್ ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ ಆಕೆಯನ್ನು ಅಪಹರಿಸಿ ಮೆಜೆಸ್ಟಿಕ್‍ನ ದೇವಸ್ಥಾನವೊಂದರಲ್ಲಿ ಅರಿಶಿನ ಕೊಂಬಿರುವ ದಾರ ಕಟ್ಟಿ ಕರೆದೊಯ್ದು ಅತ್ಯಾಚಾರ ಎಸಗಿದ್ದ. ನಂತರ ತಿರುಪತಿ, ಚೆನ್ನೈ, ಮಡಿಕೇರಿ ಮತ್ತಿತರೆಡೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ ಬೆಂಗಳೂರಿಗೆ ವಾಪಸ್ ಆಗಿ ಬಾಡಿಗೆ ಮನೆಯಲ್ಲಿರಿಸಿಕೊಂಡು ಅತ್ಯಾಚಾರ ಎಸಗಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಪೋಷಕರು ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 366ಎ (ಅಪಹರಣ) 376(ಅತ್ಯಾಚಾರ), ಬಾಲ್ಯ ವಿವಾಹ ಕಾಯ್ದೆಯ ಸೆಕ್ಷನ್ 9 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯ ಸೆಕ್ಷನ್ 3(2)(5)ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಅಭಿಯೋಜನೆ ಪರ ಸರಕಾರಿ ಅಭಿಯೋಜಕಿ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News