ಕಲ್ಲು ಹೊಡೆಯುವ ಸಂಸ್ಕೃತಿ ಮುಂದುವರಿಸಿದರೆ ಕರ್ನಾಟಕದಲ್ಲೂ ಬುಲ್ಡೋಜರ್ ಗಳು ಮನೆಗಳ ಮುಂದೆ ಬರಲಿವೆ: ಪ್ರತಾಪ್ ಸಿಂಹ

Update: 2022-04-21 08:37 GMT

ಮೈಸೂರು, ಎ.21: ಮುಸ್ಲಿಮರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು, ಕಲ್ಲು ಹೊಡೆಯುವ ಸಂಸ್ಕೃತಿ ಮುಂದುವರಿಸಿದರೆ ಕರ್ನಾಟಕದಲ್ಲೂ ಬುಲ್ಡೋಜರ್ ಗಳು ನಿಮ್ಮ ಮನೆಗಳ ಮುಂದೆ ಬರಲಿವೆ ಎಂದು  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಎಂದು ಎಚ್ಚರಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ, ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿದ ಗಲಭೆಗಳಲ್ಲಿ ಮುಸ್ಲಿಮರ ಮನಸ್ಥಿತಿ ಹೇಗಿದೆ ಎಂದು ಗೊತ್ತಾಗಿದೆ. ಮುಸ್ಲಿಮರ ಮೆರವಣಿಗೆ ಮೇಲೆ ಹಿಂದೂಗಳು ಎಂದು ಕೂಡ ಕಲ್ಲು ತೂರಾಟ ನಡೆಸಿಲ್ಲ. ಆದರೆ ಹಿಂದೂಗಳ ಮೆರವಣಿಗೆ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ ಆಗಿದೆ. ಈ ವಿಚಾರದಲ್ಲಿ ಮುಸ್ಲಿಮರ ಮನಸ್ಥಿತಿ ಬದಲಾಗಬೇಕು ಎಂದು ಹೇಳಿದ್ದಾರೆ.

ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡಿದ್ದರಿಂದ ಸಮಸ್ಯೆ ಆರಂಭವಾಯಿತು. ಮುಸ್ಲಿಮರಲ್ಲೂ ನಮ್ಮ ಡಿ ಎನ್ ಎ ಯೇ ಇದೆ. ಮುಸ್ಲಿಮರಲ್ಲೂ ನಮ್ಮದೇ ರಕ್ತ ಹರಿಯುತ್ತಿದೆ. ಮುಸ್ಲಿಮರು ಮನಸ್ಥಿತಿ ಬದಲಿಸಿಕೊಳ್ಳಬೇಕು. ಕಲ್ಲು ತೂರುವ ಸಂಸ್ಕೃತಿ ಬಿಡಬೇಕು. ಇಲ್ಲದಿದ್ದರೆ ಕಲ್ಲು ತೂರುವವರ ಬಳಿಗೆ ಬುಲ್ಡೋಜರ್ ಬರಲಿದೆ. ಇಲ್ಲದಿದ್ದರೆ ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಬೊಲ್ಡೋಜರ್ ಬಾಬಾ ಅನ್ನಿಸಿಕೊಂಡರು, ಈಗ ಮಧ್ಯಪ್ರದೇಶದಲ್ಲಿ ಆ ಕೆಲಸ ನಡೆಯುತ್ತಿದೆ. ಮುಂದೆ ಕರ್ನಾಟಕದಲ್ಲೂ ನಡೆಯಲಿದೆ ಎಂದು ಹೇಳಿದರು.

 ಅಲ್ಲಾ ಒಬ್ಬನೇ ಎಂದು ಇವರು ಮೈಕ್ ಕಟ್ಟಿ ಆಝಾನ್ ಕೂಗುತ್ತಾರೆ. ಅಲ್ಲಿಗೆ ಹೋಗಿ ಹಿ‌ಂದೂಗಳು ಎಂದಾದರೂ ಕಲ್ಲು ಹೊಡೆದಿದ್ದರಾ? ಹಿಂದಿನಿಂದಲೂ ಇವರ ದಬ್ಬಾಳಿಕೆಯನ್ನು ಹಿಂದೂಗಳು ಸಹಿಸಿಕೊಂಡು ಬಂದಿದ್ದಾರೆ. ಇನ್ನು ನಿಮ್ಮ ದಬ್ಬಾಳಿಕೆ ದೌರ್ಜನ್ಯ ನಡೆಯುವುದಿಲ್ಲ, ಹಿಂದೂಗಳ ಜೊತೆ ಸಹಿಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲೂ ಹರ್ಷನ ಕೊಲೆ ಸಂದರ್ಭದಲ್ಲಿ ಹಿಂದೂಗಳು ಕಲ್ಲು ಹೊಡೆದರಲ್ಲ, ಅವರ ಮೇಲೆ ಕ್ರಮಕ್ಕೆ ಯಾಕಿಷ್ಟು ಒತ್ತಡವನ್ನು ಬಿಜೆಪಿಯವರು ಹೇರುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಆಕ್ಷನ್ ಗೆ ರಿಯಾಕ್ಷನ್ ಇದ್ದೇ ಇರುತ್ತದೆ. ಮೊದಲು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸುತ್ತಿದ್ದರು. ಆದರೆ ಈಗ ಆ ರೀತಿ ಮಾಡುವುದಿಲ್ಲ ಒಬ್ಬ ಓರ್ವ ವ್ಯಕ್ತಿಗೆ ಹೊಡೆದರೆ ಆತನೂ ಹೊಡೆಯಬೇಕಾಗುತ್ತದೆ. ಹಾಗಾಗಿ ಆಕ್ಷನ್ ಗೆ ರಿಯಾಕ್ಷನ್ ನಡೆಯಲೇಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News